ಬೆಂಗಳೂರು: ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ದುರಂತದಲ್ಲಿ ಮೃತಪ್ಟವರೆಲ್ಲರೂ 25 ವರ್ಷಕ್ಕಿಂತ ಚಿಕ್ಕವರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಸತ್ತವರ ಪೈಕಿ 52 ವರ್ಷ ವಯಸ್ಸಿನ ಪ್ರಭಾಕರ್ ಹೊರತುಪಡಿಸಿ ಉಳಿದವರೆಲ್ಲ 25 ವರ್ಷಕ್ಕಿಂತ ಸಣ್ಣ ವಯಸ್ಸಿನವರು. ರಾಜೇಶ್(17), ಈಶ್ವರ್(17), ಗೋಕುಲ್(17) ಇನ್ನೂ ಅಪ್ರಾಪ್ತರು. ಉಳಿದಂತೆ ಪ್ರದೀಪ್ ಕುಮಾರ್ (21), ಕುಮಾರ್ (21), ಪ್ರವೀಣ್ (25), ಮಿಥುನ್ (23), ಸುರೇಶ್ (22) ಮೃತರು.

ಗಾಯಗೊಂಡ 25 ಜನರ ಪೈಕಿ ಎಲ್ಲರೂ 25 ವಯೋಮಿತಿಗಿಂತ ಕೆಳಗಿನವರು. ಮೃತರೆಲ್ಲರೂ ತಂದೆ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದು, ಮನೆಗೆ ಆಧಾರಸ್ಥಂಭವಾಗಿದ್ದವರೇ ಎನ್ನಲಾಗಿದೆ. ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಘಟನೆಯಲ್ಲಿ ಮೃತಪಟ್ಟವರ್ಯಾರು ಸ್ಥಳೀಯರಲ್ಲ. ಒಂಬತ್ತು ಮಂದಿಯೂ ಜಿಲ್ಲೆಯ ಬೇರೆ ಬೇರೆ ಗ್ರಾಮದವರು. ಪ್ರದೀಪ್ ಕುಮಾರ್ ಬಳ್ಳಾರಿ ಮೂಲದವರಾಗಿದ್ದು, ಮಿಥುನ್ ಚಿತ್ರದುರ್ಗ ಮೂಲದವರು.