ಕದಂಬ ನೌಕಾನೆಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು: ಜಲಂತರ್ಗಾಮಿಯಲ್ಲಿ ಸಮುದ್ರಯಾನ
ಕಾರವಾರ: ರಾಷ್ಟ್ರಪತಿ, ಭಾರತದ ಸಶಸ್ತ್ರ ಪಡೆಗಳ ಮಹಾದಂಡನಾಯಕಿ ದ್ರೌಪದಿ ಮುರ್ಮು ಅವರು ಭಾನುವಾರ ಕಾರವಾರದ ಕದಂಬ ನೌಕಾನೆಲೆಗೆ ಐತಿಹಾಸಿಕ ಭೇಟಿ ನೀಡಲಿದ್ದಾರೆ.
ಏಷ್ಯಾದ ಅತಿದೊಡ್ಡ ನೌಕಾನೆಲೆಯಾಗಿ ಅಭಿವೃದ್ಧಿ ಹೊಂದುತ್ತಿರುವ ‘ಸೀಬರ್ಡ್’ಗೆ ರಾಷ್ಟ್ರಪತಿಗಳು ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು, ಕರಾವಳಿಯಲ್ಲಿ ಬಿಗಿ ಭದ್ರತೆ ಹಾಗೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಡಿ. 27ರಂದು ಗೋವಾಕ್ಕೆ ಆಗಮಿಸಲಿರುವ ರಾಷ್ಟ್ರಪತಿಗಳು, ಡಿ. 28ರಂದು ಬೆಳಗ್ಗೆ ಕಾರವಾರಕ್ಕೆ ಬರಲಿದ್ದಾರೆ. ಕಾರವಾರದ ನೌಕಾ ದಕ್ಕೆಯಿಂದ ಜಲಾಂತರ್ಗಾಮಿಯೊಂದರಲ್ಲಿ ಸಮುದ್ರಯಾನ ಕೈಗೊಳ್ಳಲಿರುವುದು ಈ ಭೇಟಿಯ ವಿಶೇಷವಾಗಿದೆ. ಮಧ್ಯಾಹ್ನದ ನಂತರ ಅವರು ಕಾರವಾರದಿಂದ ನಿರ್ಗಮಿಸಲಿದ್ದು, ಡಿ. 29ರಂದು ಜಾರ್ಖಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯಪಾಲರಿಂದ ಸ್ವಾಗತ: ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕಾರವಾರಕ್ಕೆ ಆಗಮಿಸಲಿದ್ದಾರೆ. ನೌಕಾಸೇನೆ ಅಧಿಕೃತ ಕಾರ್ಯಕ್ರಮ ಇದಾಗಿರುವುದರಿಂದ, ನೌಕಾನೆಲೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.


