ಸುದ್ದಿ

ಪೈಪ್ ಅನಿಲ(PNG) ಇರುವ ಮನೆಗಳಿಗೆ ಎಲ್‌ಪಿಜಿ ಸಿಲಿಂಡರ್‌ಗೆ ಬ್ರೇಕ್: ಕೇಂದ್ರದ ಹೊಸ ನಿಯಮ

Share It

ನವದೆಹಲಿ: ಪೈಪ್ ಮೂಲಕ ಒದಗಿಸುವ ನೈಸರ್ಗಿಕ ಅನಿಲ (PNG) ಸಂಪರ್ಕ ಹೊಂದಿರುವ ಮನೆಗಳಿಗೆ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಸಂಪರ್ಕ ನೀಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಹೊಸ ನಿಯಮದ ಪ್ರಕಾರ PNG ಇರುವ ಗ್ರಾಹಕರು ಎಲ್‌ಪಿಜಿ ಸಂಪರ್ಕವನ್ನು ಉಳಿಸಿಕೊಳ್ಳಲು ಅಥವಾ ಹೊಸದಾಗಿ ಪಡೆಯಲು ಸಾಧ್ಯವಿಲ್ಲ ಎಂದು ಪೆಟ್ರೋಲಿಯಂ ಮತ್ತು ಪ್ರಕೃತಿ ಅನಿಲ ಸಚಿವಾಲಯ ತಿಳಿಸಿದೆ.

ಈ ತಿದ್ದುಪಡಿ ಆದೇಶದಂತೆ, ಈಗಾಗಲೇ PNG ಮತ್ತು LPG ಎರಡೂ ಸಂಪರ್ಕಗಳನ್ನು ಹೊಂದಿರುವ ಗ್ರಾಹಕರು ತಮ್ಮ ಎಲ್‌ಪಿಜಿ ಸಂಪರ್ಕವನ್ನು ತ್ಯಜಿಸಬೇಕಾಗುತ್ತದೆ. ಜೊತೆಗೆ ಸರ್ಕಾರಿ ತೈಲ ಕಂಪನಿಗಳು ಅಥವಾ ಅವರ ವಿತರಕರು ಇಂತಹ ಗ್ರಾಹಕರಿಗೆ ಹೊಸ ಎಲ್‌ಪಿಜಿ ಸಂಪರ್ಕ ನೀಡುವುದಕ್ಕೂ, ಸಿಲಿಂಡರ್ ಮರುಪೂರೈಕೆ ಮಾಡುವುದಕ್ಕೂ ಅವಕಾಶ ಇರುವುದಿಲ್ಲ.

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎಲ್‌ಪಿಜಿ ಸರಬರಾಜಿನ ಮೇಲೆ ಹೆಚ್ಚುತ್ತಿರುವ ಒತ್ತಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾಗತಿಕ ಇಂಧನ ಸರಬರಾಜಿನ ಅಸ್ಥಿರತೆ ಮತ್ತು ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪೈಪ್ ಅನಿಲ ಸೌಲಭ್ಯ ಇರುವ ಮನೆಗಳು ಅದನ್ನೇ ಬಳಸುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಇದರಿಂದ ಪೈಪ್ ಅನಿಲ ಸೌಲಭ್ಯವಿಲ್ಲದ ಮನೆಗಳಿಗೆ ಎಲ್‌ಪಿಜಿ ಸರಬರಾಜು ಸುಗಮವಾಗಲು ಸಹಾಯವಾಗುತ್ತದೆ ಎಂಬ ನಿರೀಕ್ಷೆ ಸರ್ಕಾರಕ್ಕೆ ಇದೆ. ಇದೇ ವೇಳೆ ನಗರ ಅನಿಲ ವಿತರಣಾ ಕಂಪನಿಗಳಿಗೆ PNG ಸಂಪರ್ಕ ವಿಸ್ತರಣೆ ವೇಗಗೊಳಿಸುವಂತೆ ಸೂಚಿಸಲಾಗಿದೆ.

ಈ ಹೊಸ ನಿಯಮ ಗಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದಲೇ ಜಾರಿಗೆ ಬಂದಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.


Share It

You cannot copy content of this page