ಅಪರಾಧ ಸುದ್ದಿ

ಚಿಕ್ಕಮಗಳೂರು ವ್ಯಾಪ್ತಿಯ ಅನಧಿಕೃತ ಹೋಂಸ್ಟೇ, ರೆಸಾರ್ಟ್‌ ತೆರವಿಗೆ ಸಿದ್ಧತೆ

Share It

ಚಿಕ್ಕಮಗಳೂರು: ಕೇರಳದ ವಯನಾಡು, ಅಂಕೋಲಾದ ಶಿರೂರು, ಶಿರಾಡಿ ಘಾಟ್ ಭೂಕುಸಿತ ದುರ್ಘಟನೆ ಬಳಿಕ ರಾಜ್ಯ ಸರ್ಕಾರ ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಹೋಂಸ್ಟೇ, ರೆಸಾರ್ಟ್ ತೆರವಿಗೆ ಸಿದ್ಧತೆ ನಡೆಸಿದೆ.

ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿನ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್​ಸ್ವಾಮಿ ದರ್ಗಾ, ಚಂದ್ರದ್ರೋಣ ಪರ್ವತದ ಸುತ್ತಮುತ್ತ ನಿರ್ಮಾಣವಾಗಿರುವ ಹೋಂಸ್ಟೇ, ರೆಸಾರ್ಟ್​ ಮಾಲಿಕರು ತಮ್ಮ ಹೋಂಸ್ಟೇಗೆ ಸಂಬಂಧಿಸಿದ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸುವಂತೆ ಡಿಎಫ್​ಒ ರಮೇಶ್ ಬಾಬು ಅವರು ನೋಟಿಸ್ ನೀಡಿದ್ದರು.

ದಾಖಲೆ ಪರಿಶೀಲನೆ ವೇಳೆ ಅನಧಿಕೃತವಾಗಿ ಹೋಂಸ್ಟೇ, ರೆಸಾರ್ಟ್​ಗಳನ್ನು ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ. ಚಂದ್ರದ್ರೋಣ ಪರ್ವತದ ಸಾಲಿನ ಹುಕ್ಕುಂದ, ಮಲ್ಲೇನಹಳ್ಳಿ, ಅರಿಶಿಣಗುಪ್ಪೆ, ಅಲ್ಲಂಪುರ ಭಾಗದಲ್ಲಿ 30 ಅನಧಿಕೃತ ರೆಸಾರ್ಟ್, ಹೋಂಸ್ಟೇ ಪತ್ತೆಯಾಗಿವೆ. ಈ ಎಲ್ಲ ಅನಧಿಕೃತ ರೆಸಾರ್ಟ್​, ಹೋಂಸ್ಟೇಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ತಯಾರಿ ನಡೆಸಿದೆ.

ಅನಧಿಕೃತ ಹೋಂ ಸ್ಟೇಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 2015ರ ನಂತರ ಆಗಿರುವ ಹೋಂ ಸ್ಟೇ, ರೆಸಾರ್ಟ್​ಗಳನ್ನು ತೆರವು ಮಾಡಲಾಗುತ್ತದೆ. ಅಧಿಕೃತವಾಗಿ ಅವರ ಜಮೀನಿನಲ್ಲೇ ಕಟ್ಟಿದ್ದರೆ ಯಾವುದೇ ಕ್ರಮ ಇಲ್ಲ.

ಮೂರು ಎಕರೆ ಒಳಗೆ ಇರುವವರನ್ನು ತೆರೆವುಗೊಳಿಸದಂತೆ ನಿಯಮ ಇದೆ. ಅನಧಿಕೃತ ಹೋಂ ಸ್ಟೇ, ರೆಸಾರ್ಟ್​ ನಿರ್ಮಾಣದಲ್ಲಿ ಅಧಿಕಾರಿಗಳು ಶಾಮಿಲಾಗಿದ್ದರೂ ಕೂಡ ಕ್ರಮ‌ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಈಶ್ವರ್​ ಖಂಡ್ರೆ ಎಚ್ಚರಿಕೆ ನೀಡಿದ್ದರು.


Share It

You cannot copy content of this page