ಅಲ್ಮೋರಾ: ಚಿರತೆಯೊಂದು ತಡ ರಾತ್ರಿ ಪೋಲಿಸ್ ಠಾಣೆಗೆ ನುಗ್ಗಿರುವ ಘಟನೆ ಅಲ್ಮೋರಾ ಜಿಲ್ಲೆಯ ಚೌಖುತಿಯಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಇದರಿಂದಾಗಿ ಕರ್ತವ್ಯ ನಿರತ ಸಿಬ್ಬಂದಿ ಭಯ ಭೀತರಾಗಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಚಿರತೆ ಪೋಲಿಸ್ ಠಾಣೆ ಆವರಣದಲ್ಲಿ ಕೆಲಕಾಲ ಸುತ್ತಾಡಿದ್ದು, ಯಾವುದೇ ಹಾನಿ ಮಾಡದೆ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾರಿಗೂ ಗಾಯಗಳಾಗಿಲ್ಲ ಎಂದು ಠಾಣಾಧಿಕಾರಿ (ಎಸ್‌ಒ) ಸತೀಶ್ ಚಂದ್ರ ಕಪ್ರಿ ಖಚಿತಪಡಿಸಿದ್ದಾರೆ. ಅಲ್ಮೋರಾ ಪೊಲೀಸರು ಸಂಜೆ ಮತ್ತು ಮುಂಜಾನೆ ಸಮಯದಲ್ಲಿ ಎಚ್ಚರವಾಗಿರಲು ಗ್ರಾಮಸ್ಥರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ
ಚಿರತೆಯನ್ನು ಪತ್ತೆಹಚ್ಚಲು ಸ್ಥಳೀಯರು, ಪೊಲೀಸ್ ಸಿಬ್ಬಂದಿ, ಸುರಕ್ಷತಾ ಅಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ಅಲ್ಮೋರಾದಲ್ಲಿ ಹೆಚ್ಚಾಗಿ
ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಅವುಗಳ ಆವಾಸ ಸ್ಥಾನದ ನಾಶವೇ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.