ಬೆಳಗಾವಿ: ಬೆಳಗಾವಿ ಖ್ಯಾತ ಉದ್ಯಮಿ ಹಾಗೂ ಗುತ್ತಿಗೆದಾರ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಉಮಾ ಆಲಿಯಾಸ್ ಸರಿತಾ ಹಾಗೂ ಶೋಭಿತ್ ಗೌಡ ಮತ್ತು ಪವನ್ ಅವರನ್ನು ಬಂಧಿಸಿರುವ ಪೊಲೀಸರು 14 ದನಗಳ ಕಾಲ ಜೈಲಿಗೆ ರವಾನೆ ಮಾಡಿದ್ದಾರೆ.
ಕೊನೆಗೂ, ಸಂತೋಷ ಪದ್ಮಣ್ಣವರ ಸಾವು ಸಹಜ ಸಾವಲ್ಲ. ಇದೊಂದು ಕೊಲೆ ಎನ್ನುವುದು ಸಾಬೀತುಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಳ ಮಾರುತಿ ಪೊಲೀಸರು ಈ ಮೂವರನ್ನು ಗುರುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಕ್ಟೋಬರ್ ಒಂಬತ್ತರಂದು ಸಂತೋಷ್ ಪದ್ಮಣ್ಣವರ ಅವರನ್ನು ಈ ಮೂವರು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಆದರೆ ಪತ್ನಿ ಉಮಾ ಅಲಿಯಾಸ್ ಸರಿತಾ, ಪತಿ ಸಾವಿಗೆ ಹೃದಯಘಾತ ಕಾರಣ ಎಂದು ಬಿಂಬಿಸಿದ್ದರು. ಆದರೆ, ಮಗಳಿಗೆ ಸಂದೇಹ ಬಂದು ಮಾಳಮಾರುತಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಪ್ರಕರಣದ ಸತ್ಯಾ ಸತ್ಯತೆ ಬಯಲಿಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೂ ಕೊಲೆಗಡುಕರು ಜೈಲು ಪಾಲು ಆಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಅವರು, ಸಂತೋಷ ಪದ್ಮಣ್ಣವರ ಸಾವಿನ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುತ್ತಿದೆ. ಎಲ್ಲಾ ವಿಧವಾಗಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.