ರಾಜಕೀಯ ಸುದ್ದಿ

ಸಿಎಂ ಜತೆಗಿನ ಸಭೆಯಲ್ಲಿ ಸಿಗದ ಭರವಸೆ: ಸುವರ್ಣಸೌಧದಲ್ಲಿ ಮೀಸಲಾತಿ ಹೋರಾಟಕ್ಕೆ ಚಿಂತನೆ

Share It

ಬೆಂಗಳೂರು: ಪಂಚಮಸಾಲಿ ಮೀಸಲಾತಿ ಸಂಬಂಧ ಕರೆದಿದ್ದ ಸಭೆಯಲ್ಲಿ ಸರಕಾರ ಯಾವುದೇ ಅಧಿಕೃತ ಭರವಸೆ ನೀಡದ ಹಿನ್ನೆಲೆಯಲ್ಲಿ ಡಿ.9 ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ಹೋರಾಟ ಸಮಿತಿ ತೀರ್ಮಾನಿಸಿದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ಮುಖಂಡರ ಜತೆಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದವರಿಗೆ ಸರಕಾರದಿಂದ ಯಾವುದೇ ಅಧಿಕೃತ ಭರವಸೆ ಸಿಗಲಿಲ್ಲ.

ಇದರಿಂದ ಬೇಸರಗೊಂಡ ಕೂಡಲ ಸಂಗಮ ಮಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರು, ಸರಕಾರದ ಸಭೆಯ ನಂತರವೂ ನಮ್ಮ ಹೋರಾಟ ಮುಂದುವರಿಯುತ್ತದೆ. ನಾವು ಡಿ. 9 ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಡಿ.9 ರಂದು ಪ್ರತಿಭಟನಾ ರ್ಯಾಲಿಯ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ. ಸರಕಾರ ಅಷ್ಟರಲ್ಲಿ ಯಾವುದಾದರೂ ನಿರ್ಣಯ ತೆಗೆದುಕೊಂಡರೆ ನಮಗೆ ಸಂತೋಷ. ಇಲ್ಲವಾದಲ್ಲಿ ಹೋರಾಡ ಅನಿವಾರ್ಯ ಎಂದು ತಿಳಿಸಿದರು.

ಹೋರಾಟದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಕಾರ್ಯಕರ್ತರು ಮಾತ್ರವಲ್ಲದೇ ಎಲ್ಲ ಲಿಂಗಾಯತ ಸಮುದಾಯದ ನಾಯಕರು ಭಾಗವಹಿಸಲಿದ್ದಾರೆ. ನೂರಾರು ಟ್ರ್ಯಾಕ್ಟರ್ ಗಳ ಮೂಲಕ ಹೋರಾಟಕ್ಕೆ ಜನರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಮಡೆಯುವ ಹೋರಾಟಕ್ಕೆ ಎಲ್ಲ ಲಿಂಗಾಯತ ಸಮುದಾಯದ ಬೆಂಬಲವಿದೆ. ನಮ್ಮ ಸಮುದಾಯದ ಎಲ್ಲ ಪಕ್ಷದ ಶಾಸಕರ ಬೆಂಬಲ ಕೋರಲಾಗಿದೆ. ಎಲ್ಲರ ಬೆಂಬಲದೊಂದಿಗೆ ಹೋರಾಟ ರೂಪಿಸಲಾಗುತ್ತದೆ ಎಂದು ತಿಳಿಸಿದರು.


Share It

You cannot copy content of this page