ಹೊಸದಿಲ್ಲಿ: ಸರಕಾರದ ಮುಖ್ಯಸ್ಥರು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಮನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಕ್ಷಣ ನ್ಯಾಯಾಂಗ ವ್ಯವಸ್ಥೆ ಹಾಳಾಗುವುದಿಲ್ಲ ಎಂದು ಸುಪ್ರೀಂ ಕೊರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಚೂಡ್ ಅವರ ಮನೆಯ ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದು, ಸಾರ್ವಜನಿಕ ಟೀಕೆಗೆ ಕಾರಣವಾದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ನ್ಯಾಯಮೂರ್ತಿ ಅವರು, ನ್ಯಾಯಾಂಗ ಯಾವುದೇ ಪರಿಸ್ಥಿತಿಯಲ್ಲಿ ಕೂಡ ತನ್ನ ಘನತೆಯನ್ನು ಉಳಿಸಿಕೊಂಡು ಬರುತ್ತದೆ ಎಂದು ತಿಳಿಸಿದ್ದಾರೆ.
ಈ ವಿಷಯ ಇಷ್ಟೊಂದು ಮನ್ನಣೆ ಪಡೆದುಕೊಂಡು, ಇಷ್ಟೊಂದು ಚರ್ಚೆಯಾಗುತ್ತಿರುವುದು ಅಪ್ರಸ್ತುತ. ನ್ಯಾಯಮೂರ್ತಿಗಳ ಮನೆಯ ಮಕ್ಕಳ ಮದುವೆ, ಪೂಜೆಯ ಕಾರ್ಯಕ್ರಮಗಳಲ್ಲಿ ಸರಕಾರದ ಮುಖ್ಯಸ್ಥರು ಭಾಗಿಯಾಗುವುದರಲ್ಲಿ ತಪ್ಪೇನು. ಈ ಹಿಂದೆ ಯಾವಾಗಲೂ ಆಗದ ವಿವಾದ ಈಗ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗ ಮತ್ತು ಕಾರ್ಯಾಂಗದ ಮುಖ್ಯಸ್ಥರಿಗೆ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಚರ್ಚೆ ಮಾಡಬಾರದು ಎಂಬುದು ಚೆನ್ನಾಗಿ ಗೊತ್ತಿದೆ. ಜತೆಗೆ ಶಿಷ್ಟಾಚಾರ ಕಟ್ಟುನಿಟ್ಟಾಗಿದೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ನ್ಯಾಯಾಂಗದ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಪಾತ್ರವೇನು ಎಂಬ ಬಗ್ಗೆ ನ್ಯಾಯಾಂಗದ ಮುಖ್ಯಸ್ಥರು ಮತ್ತು ಕಾರ್ಯಾಂಗದ ಮುಖ್ಯಸ್ಥರಿಗೆ ಚೆನ್ನಾಗಿ ಅರಿವಿದೆ. ಕೆಲವೊಮ್ಮೆ ನ್ಯಾಯಾಂಗದ ಅಭಿವೃದ್ಧಿ ಸಲುವಾಗಿ ಭೇಟಿಯಾಗಿ ಚರ್ಚಿಸಬೇಕಾಗುತ್ತದೆ. ಇಷ್ಟೆಲ್ಲ ಇದ್ದರೂ, ವಿವಾದ ಸೃಷ್ಟಿಯಾಗುತ್ತಿರುವುದು ಅಸಂಬದ್ಧ ಎಂದು ಅಭಿಪ್ರಾಯ ಪಟ್ಟಿದ್ದಾರೆ.