ಬೆಳಗಾವಿ :ಹಗುರವಾಗಿ ಕಾರು ಚಲಾಯಿಸಿ ಎಂದಿದ್ದಕ್ಕೆ ಯುವಕ ಮತ್ತು ಈತನ ಸಹೋದರಿ ಮೇಲೆ ನಾ ಡ್ರೈವರ್ ಹಾಡಿನ ಖ್ಯಾತಿಯ ಗಾಯಕ ಮಾಳು ನಿಪನಾಳ ಹಲ್ಲೆ ಮಾಡಿದ್ದಾರೆ.
ಗಾಯಗೊಂಡ ಶೇಖಪ್ಪ ಹಕ್ಯಾಗೋಳ ಮತ್ತು ಸಹೋದರಿ ಇದೀಗ ಚಿಕ್ಕೋಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವಕ ಮತ್ತು ಸಹೋದರಿಗೆ ಗಾಯವಾಗಿದೆ. ರಾಯಬಾಗ ತಾಲೂಕು ನಿಪನಾಳ ಗ್ರಾಮದ ಹೊರ ವಲಯದಲ್ಲಿ ಯುವಕ ಮತ್ತು ಆತನ ಸಹೋದರಿ ಬೈಕ್ ನಲ್ಲಿ ಹೋಗುತ್ತಿದ್ದರು.
ಆಗ ನಾ ಡ್ರೈವರ್ ಹಾಡಿನ ಗಾಯಕ ಮಾಳು ನಿಪನಾಳ ಮತ್ತು ಆತನ ಸ್ನೇಹಿತರು ಕಾರಿನಲ್ಲಿ ತೆರಳುವ ವೇಳೆ ಎದುರಿಗೆ ಬಂದ ಯುವಕನ ಬೈಕ್ ಮೇಲೆ ಕಾರು ಬಂದಿದೆ. ಆಗ ಬೈಕ್ ನಲ್ಲಿದ್ದ ಮಹಿಳೆ ಸ್ವಲ್ಪ ನೋಡಿಕೊಂಡು ಕಾರು ಓಡಿಸಿ ಎಂದು ಹೇಳುತ್ತಿದ್ದಂತೆ, ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಇದಕ್ಕೂ ಮೊದಲು ಮಾಳು ನಿಪನಾಳ ಮೇಲೆ ಮೂರು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಎಸ್ ಪಿ ಭೀಮಶಂಕರ್ ಗುಳೇದವರು, ಜಾನಪದ ಕಲಾವಿದ ಮಾಳು ಕೆಲವರ ಮೇಲೆ ಹಲ್ಲೆ ಮಾಡಿರುವುದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಗೊತ್ತಾಗಿದೆ. ಪ್ರಕರಣದಲ್ಲಿ ನೊಂದ ಶೇಖಪ್ಪ ಹಾಗೂ ಸಂಬಂಧಿಕರು ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೊಂದವರಿಗೆ ಪೊಲೀಸರು ಕರೆ ಮಾಡಿ ಪ್ರಕರಣ ದಾಖಲಿಸುವಂತೆ ಹೇಳಿದ್ದು ಚಿಕಿತ್ಸೆ ಪಡೆಯುತ್ತಿರುವ ಅವರು ನಂತರ ಪ್ರಕರಣ ದಾಖಲು ಮಾಡುವುದಾಗಿ ಹೇಳಿದ್ದಾರೆ. ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳಬಾರದು. ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನು ಕೈಗೆತ್ತಿಕೊಂಡರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.