ಬೆಂಗಳೂರು: ಬಿಜೆಪಿ ಸದಸ್ಯತ್ವ ನೋಂದಣಿಯಡಿ ನ.6ರ ವರೆಗೆ 68ಲಕ್ಷ ಸದಸ್ಯತ್ವ ನೋಂದಣಿಯಾಗಿದೆ. ಸೆ.2ಕ್ಕೆ ಸದಸ್ಯತ್ವ ನೋಂದಣಿಗೆ ಬಿಜೆಪಿ ಚಾಲನೆ ನೀಡಿದ್ದು, ನವೆಂಬರ್ ಅಂತ್ಯದವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ.
50 ಜನರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ನೋಂದಣಿ ಮಾಡಿಸಿದವರಿಗೆ ಸಕ್ರಿಯ ಸದಸ್ಯತ್ವ ನೀಡಲಾಗುತ್ತದೆ. ಈ ಲೆಕ್ಕಾಚಾರದಂತೆ ಸಕ್ರಿಯ ಸದಸ್ಯರ ಸಂಖ್ಯೆ 1.35 ಲಕ್ಷಕ್ಕೇರಿದ್ದು, ಪ್ರಾಥಮಿಕ ಹಾಗೂ ಸಕ್ರಿಯ ಸದಸ್ಯತ್ವದಲ್ಲಿ ಗುರಿ ಮೀರಿಸಾಧನೆ ಆಶಾಭಾವನೆ ವ್ಯಕ್ತವಾಗಿದೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಪಕ್ಷದ ಸಹಿತ ವರದಿ ಸಲ್ಲಿಕೆಯಾಗಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಸಮಕ್ಷಮ ಪ್ರಾಥಮಿಕ ಮತ್ತು ಸಕ್ರಿಯ ಸದಸ್ಯತ್ವದ ಪ್ರಗತಿ ಪರಿಶೀಲನೆಯಾಯಿತು. ರಾಜ್ಯದಲ್ಲಿ ಈವರೆಗೆ ಸಾಧಿಸಿದ ಪ್ರಗತಿ ಬಗ್ಗೆ ಅಂಕಿ-ಅಂಶಗಳ ಸಹಿತ ವರದಿ ಸಲ್ಲಿಸಲಾಗಿದೆ ಎನ್ನಲಾಗಿದೆ.
ಪ್ರಸಕ್ತ ವರ್ಷದ ನೋಂದಣಿ ಪ್ರಕ್ರಿಯೆ ಬಿಗಿಯಾಗಿದ್ದರೂ ಹೆಚ್ಚಿನ ಪರಿಶ್ರಮ, ಮುತುವರ್ಜಿ ವಹಿಸಿದರೆ ಮನವೊಲಿಕೆ, ಸದಸ್ಯತ್ವ ನೋಂದಣಿ ಸುಗಮವಾಗುತ್ತದೆ ಎಂದು ಸುಧಾಕರ್ ರೆಡ್ಡಿ ಸಲಹೆ ನೀಡಿದ್ದಾರೆ.
ಬೂತ್, ಮಂಡಲ ಹಾಗೂ ಜಿಲ್ಲಾಹಂತದವರೆಗೆ ಎಲ್ಲ ಮುಖಂಡರು, ಕಾರ್ಯಕರ್ತರು ತಂಡವಾಗಿ ಕೆಲಸ ಮಾಡಿ, ಉಳಿದ ಅವಧಿಯಲ್ಲಿ ಇನ್ನೂ ಏಳೆಂಟು ಲಕ್ಷ ಪ್ರಾಥಮಿಕ ಸದಸ್ಯರ ನೋಂದಣಿಗೆ ಪ್ರಯತ್ನಿಸುವುದಾಗಿ ರಾಜ್ಯ ಸಮಿತಿ ತಿಳಿಸಿದೆ.
ಆನ್‌ಲೈನ್‌ನಲ್ಲಿ ಪೂರ್ಣ ತುಂಬಿದ ಅರ್ಜಿ ಅಪ್‌ಲೋಡ್ ಆದ ನಂತರವಷ್ಟೇ ಸದಸ್ಯತ್ವ ನೋಂದಣಿ ಖಾತರಿಯಾಗುತ್ತದೆ. ಅಭಿಯಾನದ ಪ್ರಗತಿಯನ್ನು ಕಾಲಕಾಲಕ್ಕೆ ಪಕ್ಷದ ರಾಷ್ಟ್ರೀಯ ನಾಯಕರು ಸಹ ಗಮನಿಸುತ್ತಿರುತ್ತಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಎಲ್ಲ ವಿವರಗಳುಳ್ಳ ಅರ್ಜಿಗಳು ದತ್ತಾಂಶದ ಕಣಜವೇ ಆಗಿದೆ. ಆಸಕ್ತರು ಮಾತ್ರ ಮಾಹಿತಿ ಒದಗಿಸಿ ಸದಸ್ಯತ್ವ ಪಡೆದಿರುತ್ತಾರೆ. ಇದರಿಂದಾಗಿ ಪಕ್ಷಕ್ಕೆ ಗಟ್ಟಿ ನೆಲೆ, ದೃಢವಾದ ಕಾರ್ಯಜಾಲ ದೊರೆತು ಯಾವುದೇ ಸಂದೇಶವನ್ನು ಕ್ಷಿಪ್ರ ವೇಗದಲ್ಲಿ ಬೂತ್ ಮಟ್ಟದವರೆಗೆ ತಲುಪಿಸಲು ಸಾಧ್ಯವಾಗಲಿದೆ.
ಸದಸ್ಯತ್ವ ನೋಂದಣಿ ಬಳಿಕ ಸಮಿತಿಗಳ ಪುನರ್ ರಚನೆ ಶುರುವಾಗಲಿದೆ. ಅಭಿಯಾನದಲ್ಲಿ ತೊಡಗಿಸಿಕೊಂಡವರು, ಸದಸ್ಯತ್ವ ಸಾಧನೆ ಆಧಾರದಲ್ಲಿ ಆಸಕ್ತಿ ಮತ್ತು ಸಮರ್ಥರನ್ನು ಗುರುತಿಸಿ ಜವಾಬ್ದಾರಿ ನೀಡಲು ನೆರವಾಗಲಿದೆ ಎಂದು ಪಕ್ಷದ ಮೂಲಗಳು ವಿಶ್ಲೇಷಿಸಿವೆ.