ಬೆಂಗಳೂರು: ದಲಿತರ ಅವಹೇಳನದ ಆರೋಪದಲ್ಲಿ ಬಿಜೆಪಿ ಶಾಸಕ ಮುನಿರತ್ನ ಬಂಧನದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಬಂಧನ ಮಾಡುವಂತೆ ದಲಿತ ಸಂಘಟನೆಗಳು ಆಗ್ರಹಿಸಿವೆ.
ಯಾದಗಿರಿಯ ಪ್ರಜಾಪ್ರಭುತ್ವ ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ ಶಾಸಕ ಚೆನ್ನಾರೆಡ್ಡಿ ಅವರ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡಸಿದವು. ಚೆನ್ನಾರೆಡ್ಡಿ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪಟ್ಟುಹಿಡಿದು ಪ್ರತಿಭಟಿಸಿದವು.
ದಲಿತರಿಗೆ ಅವಹೇಳನ ಮಾಡಿದ ಆರೋಪದಲ್ಲಿ ಎರಡೇ ದಿನದಲ್ಲಿ ಮುನಿರತ್ನ ಬಂಧನವಾಗಿದೆ. ಆದರೆ, ಆಡಳಿತ ಪಕ್ಷದ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಪಿಎಸ್ಐ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಪಿಎಸ್ಐ ನಿಗೂಢ ಸಾವಿನಲ್ಲಿ ಚೆನ್ನಾರೆಡ್ಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅವರ ಬಂಧನ ಮಾಡಿ, ವಿಚಾರಣೆ ನಡೆಸಬೇಕು ಎಂಬ ಒತ್ತಾಯವಿದೆ. ಆದರೆ, ಈವರೆಗೆ ಪೊಲೀಸರು ಅವರನ್ನು ಬಂಧಿಸಿಲ್ಲ. ಆದರೆ ಇಂದು ಸರಕಾರದ ಕಾರ್ಯಕ್ರಮಕ್ಕೆ ಬಂದಿದ್ದರು. ಇದನ್ನು ದಲಿತ ಸಂಘಟನೆಗಳು ವಿರೋಧಿಸಿದವು.
PSI ಪರುಶುರಾಮ್ ಅವರ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ಸಿಐಡಿ ನಡೆಸುತ್ತಿದೆ. ಹೀಗಾಗಿ, ದಲಿತ ಸಂಘಟನೆಗಳ ಒತ್ತಾಯ ಹೆಚ್ಚಾಗಿದೆ.

