ಉಡುಪಿ: ಗಾಂಜಾ ಮಾರಾಟ, ಸಾಗಾಟ ಮಾಡುತ್ತಿದ್ದ ಮೈಸೂರು ಹಾಗು ಆಂಧ್ರದ ಇಬ್ಬರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಗಾಂಜಾ, ಸಾಗಾಟಕ್ಕೆ ಬಳಸಿದ್ದ ಲಾರಿ, ಮೊಬೈಲ್ ಫೋನ್ ಹಾಗೂ ನಗದು ಹಣ ವಶಪಡಿಸಿಕೊಳ್ಳಲಾಗಿದೆ.
ಗಣೇಶ.ಪಿ(38), ಗೋಪಾಲ ರೆಡ್ಡಿ (43) ಬಂಧಿತ ಆರೋಪಿಗಳು. ಗಣೇಶ ಎಂಬಾತ ಹುಣಸೂರು ತಾಲೂಕಿನ ಕುಪ್ಪೆಯ ನಿವಾಸಿಯಾದರೆ, ಗೋಪಾಲ ರೆಡ್ಡಿ ಆಂಧ್ರದ ಅನಂತಪುರದ ಗೊರಂಟ್ಲದ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
65 ಕೆ.ಜಿ 39 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಇದರ ಮೌಲ್ಯ 32ರಿಂದ 50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದಲ್ಲದೇ ಲಾರಿ, 2 ಮೊಬೈಲ್ ಫೋನ್, 1,520 ರೂಪಾಯಿ ನಗದು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಒಟ್ಟು ವಸ್ತುಗಳ ಒಟ್ಟು ಮೊತ್ತ 72,21,520 ರೂಪಾಯಿ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ. ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕರಾವಳಿಗೆ ಗಾಂಜಾ ಪೂರೈಕೆ ಮಾಡುವ ಬಹುದೊಡ್ಡ ಜಾಲ ಇದಾಗಿದೆ. ಇಬ್ಬರನ್ನು ಬಂಧಿಸಿದ್ದು, ಹಿಂದೆ ಇರುವವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಇತ್ತೀಚಿಗೆ ಮಂಗಳೂರು ನಗರದಲ್ಲಿ ಸಿಸಿಬಿ ತಂಡ 123 ಕೆ.ಜಿ ಗಾಂಜಾ ಮತ್ತು ಅದನ್ನು ಸಾಗಣೆ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡಿತ್ತು. ಕೇರಳದ ಕಾಸರಗೋಡು ತಾಲೂಕಿನ ಮಸೂದ್ ಎಂ.ಕೆ (45), ಮೊಹಮ್ಮದ್ ಆಶಿಕ್ (24) ಮತ್ತು ಸುಬೇರ್ (30) ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು.