ಹನೂರು: ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಪಚ್ಚೆಮಲ್ಲು, ಗಣೇಶ್, ಗೋವಿಂದೇಗೌಡ ಹಾಗೂ ಶಂಪು ಬಂಧಿತರು. ಆರೋಪಿಗಳನ್ನು ಭಾನುವಾರ ಕೊಳ್ಳೇಗಾಲದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಜೆಎಂಎಫ್ಸಿ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದರು.
ಪ್ರತೀಕಾರದ ಹತ್ಯೆ: ಕಾಡಿನಲ್ಲಿ ಮೇಯಲು ಹೋಗಿದ್ದ ಹಸುವನ್ನು ತಿಂದು ಹಾಕಿದ್ದಕ್ಕೆ ಪ್ರತೀಕಾರವಾಗಿ ಹುಲಿಗೆ ವಿಷಹಾಕಿ ಹತ್ಯೆ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಹುಲಿ ಸತ್ತ ಬಳಿಕ ಪ್ರಕರಣ ಮುಚ್ಚಿಹಾಕಲು ಆರೋಪಿಗಳು ಕಳೇಬರವನ್ನು ಮೂರು ತುಂಡುಗಳಾಗಿ ಕತ್ತರಿಸಿ ಮುಚ್ಚಿಡಲು ಯತ್ನಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜುಲೈ ೨೬ರಂದು ಇದೇ ಅರಣ್ಯದಲ್ಲಿ ಹಸು ಕೊಂದಿದ್ದಕ್ಕೆ ಪ್ರತೀಕಾರವಾಗಿ ಐದು ಹುಲಿಗಳಿಗೆ ವಿಷವಿಕ್ಕಿ ಹತ್ಯೆ ಮಾಡಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಹುಲಿ ಹತ್ಯೆ ನಡೆದಿದೆ.