ಬೆಂಗಳೂರು: ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರಿಗೆ ನೀಡಿರುವ ಅಧ್ಯಕ್ಷ ಸ್ಥಾನದಿಂದ ಕೂಡಲೇ ಅವರನ್ನು ತೆಗೆದು ಹಾಕಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಆಗ್ರಹ ಮಾಡಿದ್ದಾರೆ.
ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಮತ್ತೇ ವಶಕ್ಕೆ ಪಡೆಯಲಾಗಿದೆ. ಪ್ರಸ್ತುತ ವಿನಯ್ ಕುಲಕರ್ಣಿ “ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ” ಅಧ್ಯಕ್ಷರ ಮತ್ತು ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಸುಪ್ರೀಂ ಕೋರ್ಟ್ ಅವರ ಜಾಮೀನು ರದ್ದುಗೊಳಿಸಿ, ಜೂ.12 ರಂದು ಅವರನ್ನು CBI ವಶಕ್ಕೆ ನೀಡಲಾಗಿದೆ.
ಹೀಗಾಗಿ, ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸರ್ಕಾರದ ನೀಡಿದ್ದ “ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ”(KUWS & DB) ಯ ಅಧ್ಯಕ್ಷ ಸ್ಥಾನದಿಂದ ಅವರನ್ನು ವಜಾಗೊಳಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಅಲ್ಲದೇ, “ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ” ಯಲ್ಲಿ ಬೃಹತ್ ಭ್ರಷ್ಟಾಚಾರ ನಡೆಯುತ್ತಿದ್ದು, ಈಗಾಗಲೇ ಕೇಂದ್ರ ಸರ್ಕಾರದ “AMRUT ಯೋಜನೆ”ಅಡಿಯಲ್ಲಿ 2023-24 ಮತ್ತು 2024-25 ರ ಅವಧಿಯಲ್ಲಿ ಬಿಡುಗಡೆಯಾದ 17,000 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡಿರುವ ಹಗರಣವನ್ನು ಜಾರಿ ನಿದೇಶನಾಲಯ ತನಿಖೆ ನಡೆಸುತ್ತಿರುತ್ತದೆ.
ಆದ್ದರಿಂದ ವಿನಯ್ ಕುಲಕರ್ಣಿ ಅವರನ್ನು ಆ ಸ್ಥಾನದಿಂದ ವಜಾಗೊಳಿಸಿ, ಮಂಡಳಿಯಲ್ಲಿ ನಡೆಯುತ್ತಿರುವ ಹಗರಣಗಳ ಕುರಿತು ತನಿಖೆ ನಡೆಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.