ರಾಜಕೀಯ ಸುದ್ದಿ

ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ ನಿಧನ

Share It

ಬೆಳಗಾವಿ: ನಿಪ್ಪಾಣಿಯ ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ ಅವರು ಇಂದು ಬೆಳಗಾವಿಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

68 ವರ್ಷ ವಯಸ್ಸಿನ ಕಾಕಾಸಾಹೇಬ್ ಪಾಟೀಲ್ ಅವರು ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿನಿಧಿಸುತ್ತ ಬಂದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದ್ದರು.

1975ರಲ್ಲಿ ದೇವ ಚಂದ್ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿದ ಅವರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿ ಹಲವು ಬಾರಿ ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗುತ್ತಾ ಬಂದಿದ್ದರು. ಮರಾಠಾ ಸಮುದಾಯಕ್ಕೆ ಸೇರಿರುವ ಅವರು ತಮ್ಮ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹರಿದು ಬರುವಂತೆ ಶ್ರಮಿಸಿದ್ದರು.

1999, 2004, 2008ರಲ್ಲಿ ಮೂರು ಬಾರಿ ಅವರು ನಿಪ್ಪಾಣಿ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು‌. ಆದರೆ ನಂತರದ ಚುನಾವಣೆಗಳಲ್ಲಿ ಅವರು ಪರಾಭವ ಅನುಭವಿಸಿದ್ದರು.


Share It

You cannot copy content of this page