ರಾಜಕೀಯ ಸುದ್ದಿ

ಚನ್ನಪಟ್ಟಣ: ಇದು ಸೋತವರ ಪ್ರತಿಷ್ಠೆಯ ಕಣ

Share It


ಡಿಕೆ ಸಹೋದರರಿಗೆ ಲೋಸಕಭೆ, ಯೋಗೇಶ್ವರ್ ವಿಧಾನಸಭೆ, ನಿಖಿಲ್ ಎರಡರಲ್ಲೂ ಸೋತವರು !

ಬೆಂಗಳೂರು: ಉಪಕದನ ರಂಗೇರುತ್ತಿದ್ದು ಮೂರು ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಅದರಲ್ಲೂ, ಕಳೆದ ಚುನಾವಣೆಯಲ್ಲಿ ಸೋತವರಿಗೆಲ್ಲ ಗೆಲ್ಲಲೇಬೇಕಾದ ಅನಿವಾರ್ಯ ಸೃಷ್ಡಿಯಾಗಿದೆ.

ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್, ಚನ್ನಪಟ್ಟಣ ಒಳಗೊಂಡ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಹಿಡಿತ ಕಳೆದುಕೊಂಡರು. ಸುರೇಶ್, ಲೋಕಸಭೆಯಲ್ಲಿ ಪರಾಭವಗೊಂಡರು. ಇದು ಡಿಸಿಎಂ ಆಗಿದ್ದಿಯೂ, ಅತ್ಯಂತ ಪ್ರಭಾವಿ ಎನಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್ ಪ್ರತಿಷ್ಠೆಗೆ ಪೆಟ್ಟುಕೊಟ್ಟ ಸೋಲಾಗಿತ್ತು. ಹೀಗಾಗಿ, ಚನ್ನಪಟ್ಟಣ ಗೆಲುವಿನ ಮೂಲಕ ತಮ್ಮ ಬಲವೇನು ಎಂಬುದನ್ನು ಸಾಭೀತುಪಡಿಸಲು ಡಿ.ಕೆ.ಸಹೋದರರು ಸಿದ್ಧವಾಗಿದ್ದಾರೆ. ಹೀಗಾಗಿ ಅವರ ಪಾಲಿಗೆ ಇದು ಪ್ರತಿಷ್ಠೆಯ ಕಣ ಎಂದರೆ ತಪ್ಪಾಗದು.

ಜತೆಗೆ ಕುಮಾರಸ್ವಾಮಿ ಜತೆಗೆ ಸದಾ ಜಿದ್ದಿನ ರಾಜಕಾರಣ ಮಾಡುತ್ತಲೇ ಬಂದಿರುವ ಡಿ.ಕೆ.ಸಹೋದರರು ಕುಮಾರಸ್ವಾಮಿ ಅವರ ಹಿಡಿತವನ್ನು ರಾಮನಗರದಲ್ಲಿ ಕೊನೆಗಾಣಿಸಲು ಮುಂದಾಗಿದ್ದಾರೆ. ರಾಜ್ಯಾದ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದರೂ, ಡಿ.ಕೆ.ಸಹೋದರರ ಪ್ರಾಬಲ್ಯ ಕನಕಪುರ ದಾಟದಂತೆ ಮಾಡಿದ್ದು ಕುಮಾರಸ್ವಾಮಿ. ಹೀಗಾಗಿ, ಇದೀಗ ರಾಮನಗರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವ ಡಿಕೆಶಿ, ಚನ್ನಪಟ್ಟಣದ ಮೇಲೆ ಕಣ್ಣಾಕಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಸುವ ಮೂಲಕ ಜೆಡಿಎಸ್ ಪ್ರಾಬಲ್ಯವನ್ನು ಜಿಲ್ಲೆಯಲ್ಲಿ ಕೊನೆಗಾಣಿಸಿದಂತಾಗುತ್ತದೆ. ಜತೆಗೆ ಹಿಂದುತ್ವದ ಮೂಲಕ ಬೆಳೆಯಲು ಹೊರಟಿರುವ ಬಿಜೆಪಿಗೂ ಆರಂಭದಲ್ಲಿಯೇ ಕಡಿವಾಣ ಹಾಕಿದಂತಾಗುತ್ತದೆ. ಆ ಮೂಲಕ ತಮ್ಮನ್ನು ರಾಜ್ಯ ನಾಯಕ ಎಂದು ಬಿಂಬಿಸಿಕೊಳ್ಳಲು ಚನ್ನಪಟ್ಟಣ ಚುನಾವಣೆಯೊಂದು ವೇದಿಕೆಯಾಗಲಿದೆ.

ನಿಖಿಲ್, ಎಚ್.ಡಿಕೆಗೆ ಅಳಿವು- ಉಳಿವಿನ ಪ್ರಶ್ನೆ: ನಿಖಿಲ್ ಕುಮಾರಸ್ವಾಮಿ ರಾಜಕಾರಣವೇ ಬೇಡ ಎಂದು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವರು. ಅನಿವಾರ್ಯವಾಗಿ ಮಂಡ್ಯ ಕಣಕ್ಕಿಳಿದು, ಸೋತು ಸುಣ್ಣವಾಗಿ ಅವಮಾನದಿಂದ ಕುದ್ದುಹೋಗಿದ್ದರು. ಆದರೆ, ಮತ್ತೇ ರಾಮನಗರ ವಿಧಾನಸಭೆಗೆ ಸ್ಪರ್ಧಿಸಿ, ಅಲ್ಲಿಯೂ ಸೋತರು. ಇದೀಗ ಚನ್ನಪಟ್ಟಣದ ಮೂಲಕ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಇಳಿದಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಸೋತರೆ ನಿಖಿಲ್ ಕುಮಾರಸ್ವಾಮಿ ಭವಿಷ್ಯ ಬಹುತೇಕ ಮಂಕಾದಂತೆಯೇ ಸರಿ. ಈ ಅನುಕಂಪ ಗಿಟ್ಟಿಸುವ ಪ್ರಯತ್ನವೂ ಅವರಿಂದ ನಡೆಯುತ್ತಿದೆ. ಜತೆಗೆ, ಚನ್ನಪಟ್ಟಣ ಸೋತರೆ, ಎಚ್.ಡಿಕೆ. ಮತ್ತು ಜೆಡಿಎಸ್ ಪ್ರಾಬಲ್ಯ ರಾಮನಗರದಲ್ಲಿ ಕೊನೆಗೊಂಡಂತೆಯೇ ಎನ್ನಲಾಗುತ್ತಿದೆ. ಹೀಗಾಗಿ, ಜೆಡಿಎಸ್ ಪಾಲಿಗಂತೂ ಚನ್ನಪಟ್ಟಣ ಅಳಿವು ಉಳಿವಿನ ಅಖಾಡವಾಗಿದೆ.

ಯೋಗೇಶ್ವರ್ ಭವಿಷ್ಯ ಬರೆಯಲಿದೆ ಫಲಿತಾಂಶ: ಸಿ.ಪಿ.ಯೋಗೇಶ್ವರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತಿದ್ದರು. ಇದೀಗ ಬಿಜೆಪಿ ಕೊಟ್ಟಿದ್ದ ವಿಧಾನಪರಿಷತ್ ಸದಸ್ಯತ್ವ ತ್ಯಜ್ಯಿಸಿ ಕಾಂಗ್ರೆಸ್ ಸೇರಿ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.

ಗೆದ್ದರೆ, ಅವರ ಭವಿಷ್ಯ ತೆರೆದುಕೊಳ್ಳಲಿದೆ. ಇಲ್ಲವಾದಲ್ಲಿ ಇದ್ದದ್ದನ್ನೂ ಬಿಟ್ಟು ಕೆಟ್ಟಂತಾಗುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ, ಯೋಗೇಶ್ವರ್ ಕೂಡ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.


Share It

You cannot copy content of this page