ಬೆಂಗಳೂರು: ವಿಮಾನ ನಿಲ್ದಾಣದ ಅತ್ಯಂತ ದುಬಾರಿ ಹೋಟೆಲ್ ರಾಮೇಶ್ವರಂ ಕೆಫೆ ಹೊಟೇಲ್ ನ ತಿಂಡಿಯಲ್ಲಿ ಜಿರಲೆ ಬಿದ್ದಿದ್ದು, ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಲೋಕನಾಥ್ ಎಂಬುವರು ಪೊಂಗಲ್ ಖರೀದಿ ಮಾಡಿದ್ದರು. ಪೊಂಗಲ್ ಗೆ 300 ರು. ಹಾಗೂ ಫಿಲ್ಟರ್ ಕಾಫಿಗೆ 180 ರು. ಸೇರಿ GST ಸಮೇತ 504 ರು ಬಿಲ್ ಆಗಿತ್ತು. ಈ ವೇಳೆ ಅವರು ಪಡೆದಿದ್ದ ಪೊಂಗಲ್ ನಲ್ಲಿ ಜಿರಲೆ ಪತ್ತೆಯಾಗಿದೆ ಎನ್ನಲಾಗಿದ್ದು, ಗ್ರಾಹಕರ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಗ್ರಾಹಕ ಈ ಬಗ್ಗೆ ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದಾಗ ಹಾರಿಕೆಯ ಉತ್ತರ ನೀಡಿದ್ದಾರೆ. ಜತೆಗೆ ಪ್ಲೇಟ್ ನಿಂದ ಅದನ್ನು ತೆಗೆದು ಬಿಸಾಕಲು ಮುಂದಾಗಿದ್ದಾರೆ. ಇದಕ್ಕೆ ಲೋಕನಾಥ್ ಆಕ್ರೋಶ ವ್ಯಕ್ತಪಡಿಸಿದ್ದು, ಹೋಟೆಲ್ ಸಿಬ್ಬಂದಿಗೆ ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ರಾಮೇಶ್ವರಂ ಕೆಫೆಯಲ್ಲಿ ತಿಂಡಿ ತಿಂದವರಿಗೆ ನೀಡು ಕುಡಿಯಲು ನಿರಾಕರಿಸಿದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ರಾಮೇಶ್ವರಂ ಕೆಫೆ ಬೆಂಗಳೂರು ಮೂಲದ ಬ್ರ್ಯಾಂಡ್ ಆಗಿದ್ದು, ಮಾರತಹಳ್ಳಿ ಬ್ರ್ಯಾಂಚ್ ನ ಸ್ಫೋಟದ ನಂತರ ಸಾರ್ವಜನಿಕ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿತ್ತು.