ಬೆಂಗಳೂರು: ನಟ ದರ್ಶನ್ ಗೆ ಬಿಗ್ ಶಾಕ್ ನೀಡಿರುವ ಸುಪ್ರೀಂ ಕೋರ್ಟ್, ಕೊಲೆ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿದ್ದ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ.
ಸುಪ್ರೀಂ ಕೋರ್ಟ್ ನಟ ದರ್ಶನ್ ಜಾಮೀನಿನ ವಿರುದ್ಧ ಎಸ್ಐಟಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ, ಅಂತಿಮವಾಗಿ ಅವರ ಜಾಮೀನು ರದ್ದುಗೊಳಿಸಿದೆ. ಆ ಮೂಲಕ ದರ್ಶನ್ ಅವರು ಮತ್ತೇ ಜೈಲು ಸೇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ದರ್ಶನ್ ಬಂಧಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಹಾಕಿದ್ದರು. ಜೈಲಿನಲ್ಲಿ ನಡೆದ ಕೆಲ ಘಟನೆಗಳ ನಂತರ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು. ಅನಾರೋಗ್ಯದ ಕಾರಣ ನೀಡಿದ ಹೈಕೋರ್ಟ್ ನಿಂದ ಅವರು ಜಾಮೀನು ಪಡೆದುಕೊಂಡಿದ್ದರು.
ಹೈಕೋರ್ಟ್ ನೀಡಿದ ಜಾಮೀನು ರದ್ದುಗೊಳಿಸಬೇಕು ಎಂದು ಕೋರಿ ಎಸ್ಐಟಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಮಾನದ ವಿರುದ್ಧ ವಿಚಾರಣಾ ಹಂತದಲ್ಲೇ ಆಕ್ಷೇಪ ವ್ಯಕ್ತಪಡಿಸಿತ್ತು.
ದರ್ಶನ್ ಪರ ವಕೀಲರು ಜಾಮೀನು ನೀಡಿರುವ ಹೈಕೋರ್ಟ್ ತೀರ್ಮಾನವನ್ನು ಸಮರ್ಥನೆ ಮಾಡಿಕೊಂಡಿದ್ದರು. ಆದರೆ, ಎಸ್ಐಟಿ ಪರ ವಕೀಲರು ದರ್ಶನ್ ಗೆ ಜಾಮೀನು ನೀಡಿರುವ ಕ್ರಮ ಸರಿಯಲ್ಲ ಎಂದು ವಾದಿಸಿದ್ದರು. ವಾದ ವಿವಾದ ಆಲಿಸಿದ ಸುಪ್ರೀಂ ಕೋರ್ಟ್, ದರ್ಶನ್ ಜಾಮೀನು ರದ್ದುಗೊಳಿಸಿದೆ.