ಕಲಬುರಗಿ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರೆದಂತಾಗಿದ್ದು, ಹೆಸರು, ಉದ್ದು ಸೇರಿ ತೊಗರಿ ಬೆಳೆ ಭಾಗಶಃ ನಾಶವಾಗಿರುವ ಕುರಿತು ಮತ್ತು ರಾಜ್ಯ ಸರ್ಕಾರ ನೀಡಬೇಕಾದ ಬಾಕಿ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಯಿತು.
ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಬೆಳೆದ ಬೆಳೆ ಕೈಗೆ ದೊರೆಯದಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಯಲ್ಲಿ ಹಾನಿಗೀಡಾಗಿರುವ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಬೇಕು, ರೈತರು ನಿತ್ಯ ಸಂಕಷ್ಟ ಎದುರಿಸುತ್ತಿದ್ದು, ಸಮಸ್ಯೆಗೆ ಶೀಘ್ರ ಸ್ಪಂದಿಸಬೇಕು ಎಂದು ಆಗ್ರಹಿಸಲಾಯಿತು.
2024-25 ನೇ ಸಾಲಿನ ಬೆಳೆ ವಿಮೆ ಬಾಕಿ ಪರಿಹಾರ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಯಿತು. ಸರ್ಕಾರ ಬೆಳೆ ವಿಮೆ ಬಾಕಿ ನೀಡುವ ಜೊತೆಗೆ, ಪ್ರಸಕ್ತ ಸಾಲಿನಲ್ಲಿ ಬೆಳೆ ಹಾನಿಗೀಡಾಗಿದ್ದು, ರೈತರಿಗೆ ಪ್ರತಿ ಎಕರೆಗೆ 25,000 ರೂ. ಪರಿಹಾರ ನೀಡಬೇಕೆಂದು ಸರ್ಕಾರದ ಗಮನ ಸೆಳೆಯಲಾಯಿತು.
ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಸ್ಪಂದಿಸಬೇಕೆಂದು ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ರಾಜ್ಯದಲ್ಲಿ ಅತಿ ಹೆಚ್ಚು ಬೆಳೆ ವಿಮೆ ಕಲಬುರಗಿ ಜಿಲ್ಲೆಗೆ ಪರಿಹಾರವಾಗಿ ದೊರಕಿದ್ದು, ಬಾಕಿ ಉಳಿದಿರುವ ಕೋಟಿ ರೂಪಾಯಿಯನ್ನು ಪರಿಶೀಲಿಸಿ ಆರ್ಥಿಕ ಇಲಾಖೆ ಅನುಮೋದನೆಗೆ ಕಳುಹಿಸಿದ್ದು ಶೀಘ್ರದಲ್ಲಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ.