ಕಲಬುರಗಿ: ತೆಲಂಗಾಣದ ಹೈದರಾಬಾದ್ನ ಮಿಯಾಪುರದಲ್ಲಿ ಸೇಡಂ ತಾಲೂಕಿನ ರಂಜೋಳ ಮೂಲದ ಮೂವರು ಸೇರಿ ಐವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಸೇಡಂ ತಾಲೂಕಿನ ರಂಜೋಳ ಗ್ರಾಮದ ಲಕ್ಷ್ಮಯ್ಯ ಉಪ್ಪಾರ(60), ಪತ್ನಿ ವೆಂಕಟಮ್ಮ ಉಪ್ಪಾರ(55), ಮಗಳು ಕವಿತಾ(24), ಅಳಿಯ ಅನಿಲ್ (32) ಮೊಮ್ಮಗ ಅಪ್ಪು (2) ಮೃತಪಟ್ಟಿದ್ದಾರೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.
ಮಿಯಾಪುರದ ಮಕ್ತಾ ಮಹಬೂಬ್ಪೇಟೆಯಲ್ಲಿ ವಾಸವಾಗಿದ್ದರು. ಗುರುವಾರ ಬೆಳಗ್ಗೆ ಮನೆಯಿಂದ ಯಾವುದೇ ಸದ್ದು ಬರದಿರುವುದು ಹಾಗೂ ವಾಂತಿಯ ವಿಪರೀತ ವಾಸನೆ ನೋಡಿಕೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯ ಡೋರ್ ಒಡೆದು ನೋಡಿದಾಗ ಮೃತದೇಹಗಳು ಕಂಡು ಬಂದಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಂಜೋಳ ಗ್ರಾಮದ ಲಕ್ಷ್ಮಯ್ಯ ಹೊಟ್ಟೆಪಾಡಿಗಾಗಿ ಹಲವು ವರ್ಷಗಳ ಹಿಂದೆ ಹೈದರಾಬಾದ್ ವಲಸೆ ಹೋಗಿದ್ದರು. ಅಲ್ಲಿಯೇ ಕೂಲಿ ಕೆಲಸ ಮಾಡುತ್ತಿದ್ದರು. ಲಕ್ಷ್ಮಯ್ಯ ಉಪ್ಪಾರ ಮತ್ತು ಅಳಿಯ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ಮಗಳು ಕವಿತಾ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಳು. ಯಾವ ಕಾರಣಕ್ಕಾಗಿ ಸಾವು ಆಗಿದೆ ಎಂಬ ಕುರಿತು ತೆಲಂಗಾಣ ಪೊಲೀಸ್ ತನಿಖೆ ನಡೆಸುತ್ತಿದೆ.