ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ ಮತ್ತು ಧರ್ಮಾಧಿಕಾರಿಗಳ ಪರ ವಿರೋಧ ಹಾಗೂ ಅಪಪ್ರಚಾರ ನನಗೆ ತಿಳಿದಿರುವಂತೆ ಸುಮಾರು ಏಳೆಂಟು ವರುಷಗಳಿಂದ ನಡೆಯುತ್ತಾ ಬಂದಿದೆ. ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಿಂದಲೂ ನಡೆಯುತ್ತಲೇ ಬಂದಿದೆ. ಆಗ ಸುಮ್ಮನಿದ್ದ ಬಿಜೆಪಿ ಈಗ ಧರ್ಮ ರಕ್ಷಣೆಗೆ ನಿಂತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಟೀಕಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಈಗ ಧರ್ಮ ರಕ್ಷಣೆ ಗೆ ಕರೆ ನೀಡಿದ್ದಾರೆ. ಇವರ ತಂದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದರು, ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದರು, ವಿಪಕ್ಷ ನಾಯಕ ಅಶೋಕ್ ಹಿರಿಯ ಮಂತ್ರಿಗಳಾಗಿದ್ದರು, ಅರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದರು. ಆಗ ಇವರಾರು ಒಂದೇ ಒಂದು ಮಾತು ಆಡಲಿಲ್ಲ. ಅಪಪ್ರಚಾರ ಹೋಗಲಾಡಿಸಿ ಷಡ್ಯಂತ್ರ ಬಯಲಿಗೆಳೆಯಲು ಯಾವುದೇ ಕ್ರಮ ಇವರಿಂದ ಆಗಿಲ್ಲ ಎಂದು ವಿವರಿಸಿದ್ದಾರೆ
ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ಚರ್ ಅವರು SIT ರಚಿಸಿರುವ ಉದ್ದೇಶ, ಸತ್ಯ ಹೊರ ಬರಲಿ, ಅಪಪ್ರಚಾರ ಅಂತ್ಯ ಕಾಣಲಿ, ಈ ಪ್ರಕರಣದ ಹಿಂದಿನ ಜಾಲ ಬಯಲಿಗೆ ಎಳೆಯಬೇಕು ಎನ್ನುವುದಾಗಿದೆ. SIT ಮುಸುಕುದಾರಿ ಹೇಳಿದ ರೀತಿ ಗುಂಡಿ ಅಗೆಯದೆ ಇದ್ದಿದ್ದರೇ, ಅಲ್ಲಿ ಏನಿದೆ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ, ಅನುಮಾನ, ಅಪಪ್ರಚಾರ, ಷಡ್ಯಂತ್ರ ಮುಂದುವರೆಯುತ್ತಿತ್ತು. ಕ್ಲಾರಿಟಿ ಸಿಗುತ್ತಿರಲಿಲ್ಲ ಎಂದಿದ್ದಾರೆ.
ಮತ್ತದೇ ವಿಷಯ ಸ್ವಲ್ಪ ದಿನಗಳ ನಂತರ ಮರುಕಳಿಸುತ್ತಿತ್ತು. ಆದರೆ ಈಗ SIT ತನಿಖೆಯಿಂದ ಅಲ್ಲಿ ಏನು ಸಿಗದಿರುವುದು ಗೊತ್ತಾಗಿದೆ. ಎಲ್ಲಾ ಅನುಮಾನಗಳಿಗೆ ಉತ್ತರ ಸಿಕ್ಕಂತಾಗಿದೆ. ಈ ಬಗ್ಗೆ ಖುದ್ದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗ್ಗಡೆ ಅವರು SIT ರಚನೆಯನ್ನು ಸ್ವಾಗತಿಸಿದ್ದಾರೆ. ನಿನ್ನೆ ಸಹ ತನಿಖೆ ನಡೆಯುತ್ತಿರುವುದರಿಂದ ನಾನು ಏನು ಹೆಚ್ಚು ಮಾತನಾಡುವುದಿಲ್ಲ ಸಂಪೂರ್ಣ ತನಿಖೆಯಾಗಲಿ, ಸತ್ಯ ಹೊರಬರಲಿ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಬಿಜೆಪಿ ವಿಚಲಿತಗೊಂಡಿದೆ ಎಂದಿದ್ದಾರೆ.
SIT ರಚನೆ ಮಾಡಿದ್ದರಿಂದಲೇ ಈ ಅಪಪ್ರಚಾರದ ಕಥೆಗೆ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗಿದೆ ಎಂಬ ಸತ್ಯ ಈಗ ಬಿಜೆಪಿ ಅರಿವಿಗೆ ಬಂದಿದೆ. ಅವರಿಗೆ ಈಗ ಭಯ ಶುರುವಾಗಿದೆ. ಎಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ, ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರಿಗೆ ಒಳ್ಳೆ ಹೆಸರು ಬರುತ್ತದೆಯೋ ಎಂಬ ಅಭ್ರದತೆಯಿಂದ ತಲೆಗೊಬ್ಬರು ದಿನಂಪ್ರತಿ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಯೂಟ್ಯೂಬರ್ಸ್ ಗಳು ಯಾರು ? ಅವರಲ್ಲೂ ಪರ ವಿರೋಧ ಮಾಡುವವರು ಇಬ್ಬರೂ ಇದ್ದಾರೆ, ಎಲ್ಲಾ ಜಾತಿ ಜನಾಂಗದವರು ಅವರಲ್ಲಿ ಇದ್ದಾರೆ, ಒಬ್ಬ ಅನ್ಯಧರ್ಮಿಯನಾಗಿದ್ದು, ಉಳಿದವರೆಲ್ಲರೂ ಹಿಂದುಗಳೆ, ಬಿಜೆಪಿ ಕಾಲದಿಂದಲೂ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬರ್ಸ್ ಗಳು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ಯೂಟ್ಯೂಬರ್ಸ್ ಗಳು ಧರ್ಮಸ್ಥಳದ ಪರ ವಹಿಸಿ ಕೂಡ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಬಿ.ಜೆ.ಪಿ ಅವರು ಯಾಕೆ ಆಗ ಕ್ರಮ ತೆಗೆದುಕೊಳ್ಳಲಿಲ್ಲ, ಅವರದೇ ಆಡಳಿತವಿತ್ತು. ಬಿಜೆಪಿ ಅವರಿಗೆ ಒಂದೇ ಒಂದು ವೋಟು ಸಿಗುತ್ತದೆ ಅಂದರೆ ಸಾಕು ಅದರಲ್ಲಿಯೂ ರಾಜಕೀಯ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
SIT ತನಿಖೆಯಿಂದ ಧರ್ಮಸ್ಥಳದ ಅಪಪ್ರಚಾರ ಹಿಂದಿನ ಮುಖವಾಡವನ್ನು ಕಳಚುವುದು, ಸತ್ಯ ಬಯಲಿಗೆಳೆಯುವುದು, ನಮ್ಮ ಸರ್ಕಾರದ ಬದ್ಧತೆಯಾಗಿದೆ, ಅದರಲ್ಲಿ ನಮ್ಮ ನಿಲುವು ಸ್ವಷ್ಟವಾಗಿದೆ ಎಂದು ತಿಳಿಸಿದ್ದಾರೆ.