ಅಪರಾಧ ರಾಜಕೀಯ ಸುದ್ದಿ

ಸೀಟ್ ಬೆಲ್ಟ್ ಧರಿಸದೆ ಸಿಎಂ ಸಿದ್ದರಾಮಯ್ಯ ಸಂಚಾರ : ಶೇ.೫೦ರ ರಿಯಾಯಿತಿ ಬಳಸಿ ದಂಡ ಪಾವತಿ

Share It

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಶೇ.50ರಷ್ಟು ದಂಡ ಪಾವತಿಯ ಆಫರ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೂ 7 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ರಿಯಾಯಿತಿ ಆಫರ್ ಬಳಸಿಕೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಾದ ಬೆನ್ನಲ್ಲೇ ಅವರ ಕಾರಿನ ಮೇಲಿದ್ದ ದಂಡ ಪಾವತಿಯಾಗಿದೆ.

ಸಿದ್ದರಾಮಯ್ಯ ಬಳಸುವ ಇನೋವಾ ಕ್ರಿಸ್ಟಾ ಕಾರು 2024 ರಿಂದ ಈವರೆಗೂ ಏಳು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ಈ ಪೈಕಿ ಆರು ಪ್ರಕರಣಗಳು ಸಿಎಂ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದಾಗಿದೆ. ಶೇ.50 ರಷ್ಟು ರಿಯಾಯಿತಿಯ ಅನುಸಾರ ಅವರು 2500 ರೂಪಾಯಿ ದಂಡ ಪಾವತಿಸಬೇಕಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆದ ಬಳಿಕ ಶುಕ್ರವಾರ ದಂಡ ಪಾವತಿಯಾಗಿದೆ ಎಂದು ಸಂಚಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪೈಕಿ ಆರು ಪ್ರಕರಣಗಳಲ್ಲಿ ಸಿದ್ದರಾಮಯ್ಯನವರು ತಮ್ಮ ಕಾರಿನ ಮುಂಭಾಗ ಕುಳಿತುಕೊಂಡರೂ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದಾರೆ. ಇಂಟಲಿಜೆAಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂನಲ್ಲಿ (ಐಟಿಎಂಎಸ್) ಸಂಚಾರ ನಿಯಮ ಉಲ್ಲಂಘಿಸಿರುವುದು ಸೆರೆಯಾಗಿದೆ.

2024 ರ ಜನವರಿ 24 ರಂದು ಮಧ್ಯಾಹ್ನ 12.19ರಲ್ಲಿ ಓಲ್ಡ್ ಏರ್ ಪೋರ್ಟ್ ರಸ್ತೆಯ ಲೀಲಾ ಪ್ಯಾಲೇಸ್ ಜಂಕ್ಷನ್ ಬಳಿ ಹೋಗುವಾಗ ಸಿದ್ದರಾಮಯ್ಯನವರು ಸೀಟು ಬೆಲ್ಟ್ ಧರಿಸಿರಲಿಲ್ಲ. ಅದೇ ಜಂಕ್ಷನ್ ನಲ್ಲಿ ಫೆಬ್ರವರಿ ಹಾಗೂ ಆಗಸ್ಟ್ ನಲ್ಲೂ ಮತ್ತೆರಡು ಪ್ರಕರಣಗಳು ದಾಖಲಾದರೆ, ಮಾರ್ಚ್ ನಲ್ಲಿ ಚಂದ್ರಿಕಾ ಹೊಟೇಲ್ ಜಂಕ್ಷನ್ ಹಾಗೂ ಆಗಸ್ಟ್ ನಲ್ಲಿ ಶಿವಾನಂದ ಸರ್ಕಲ್ ಹಾಗೂ ಡಾ.ರಾಜ್ ಕುಮಾರ್ ಪ್ರತಿಮೆ ಜಂಕ್ಷನ್ ಗಳ ಬಳಿ ಸೀಟು ಬೆಲ್ಟ್ ಧರಿಸಿದೆ ನಿಯಮ ಉಲ್ಲಂಘಿಸಿದ್ಧಾರೆ.

ಈ ವರ್ಷ ಜುಲೈ 9 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ ಪೋರ್ಟ್ ಎಕ್ಸ್ ಪ್ರೆಸ್ ಕಾರಿಡಾರ್ ನಲ್ಲಿ ಸಿಎಂ ಅವರಿದ್ದ ಕಾರು ಓವರ್ ಸ್ಪೀಡಾಗಿ ಚಲಾಯಿಸಿ ನಿಯಮ ಮೀರಿತ್ತು. ಇದೀಗ ಕಾರಿನ ಮೇಲಿದ್ದ ದಂಡ ಪಾವತಿಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ರಿಯಾಯಿತಿ ಬಳಸಿಕೊಂಡು ದಂಡ ಪಾವತಿ ಇದುವರೆಗೆ ರಾಜ್ಯದಲ್ಲಿ 40 ಕೋಟಿ ರೂ.ಗಿಂತಲೂ ಹೆಚ್ಚು ದಂಡ ಪಾವತಿಯಾಗಿದೆ.


Share It

You cannot copy content of this page