ಬೀದರ್: ಭಾಲ್ಕಿ ತಾಲೂಕಿನ ಮರೂರ ಕಾಲುವೆಗೆ ಮಂಗಳವಾರ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಬದುಕುಳಿದಿದ್ದಾರೆ.
ಬೀದರ್ ನಗರದ ಮೈಲೂರು ಬಡಾವಣೆಯ ಶಿವಮೂರ್ತಿ ಮಾರುತಿ (45), ಮತ್ತು ಅವರ 9 ವರ್ಷ, 7 ವರ್ಷ ಹಾಗೂ ಏಳು ತಿಂಗಳು ವಯಸ್ಸಿನ ಮಕ್ಕಳು ದುರಂತ ಅಂತ್ಯ ಕಂಡಿದ್ದಾರೆ. ಶಿವಮೂರ್ತಿ ಅವರ ಪತ್ನಿ ರಮಾಬಾಯಿ, ಮತ್ತು ಇನ್ನೋರ್ವ ಪುತ್ರ ಪ್ರಾಣಾಪಾಯದಿಂದ ಪರಾಗಿದ್ದಾರೆ.
ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮರೂರ ಹತ್ತಿರ ಹಾದುಹೋಗುವ ಕಾರಂಜಾ ಜಲಾಶಯದ ಕಾಲುವೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಬದುಕುಳಿದಿದ್ದಾರೆ.
ಈ ದುರಂತಕ್ಕೆ ಕೌಟುಂಬಿಕ ಕಲಹ ಹಾಗೂ ಸಹೋದರ ಆಸ್ತಿ ವ್ಯವಹಾರದ ಜಗಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆ ಹಾಗೂ ಪ್ರಚೋದನೆ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.