ಅಪರಾಧ ಸುದ್ದಿ

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ

Share It

ಬೆಳಗಾವಿ : ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಇಲ್ಲಿಯ ಪೋಕ್ಸೊ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಖಾನಾಪುರ ಅಶೋಕ ನಗರದ ಪ್ರಕಾಶ ಸತ್ತೆಪ್ಪ ಮಗದುಮ(25) ಶಿಕ್ಷೆಗೊಳಗಾದ ಆರೋಪಿ. ಈತ ಬಾಲಕಿಗೆ ನಿನ್ನನ್ನು ಪ್ರೀತಿಸುತ್ತಿದ್ದೇನೆ, ನಿನ್ನನ್ನೇ ಮದುವೆ ಆಗುತ್ತೇನೆ ಎಂದು ನಂಬಿಸಿ ಮಹಾರಾಷ್ಟ್ರದ ರತ್ನಾಗಿರಿಗೆ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ.

ಈ ಹಿನ್ನೆಲೆಯಲ್ಲಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ಬಸವರಾಜ ತೇಗೂರ ಪ್ರಕರಣ ದಾಖಲು ಮಾಡಿಕೊಂಡಿದ್ದರು. ತನಿಖಾ ಅಧಿಕಾರಿ ಪಿಎಸ್ ಐ ಶರಣೇಶ ಜಾಲಿಹಾಳ ತನಿಖೆ ನಡೆಸಿದ್ದರು. ಸಿಪಿಐ ಸುರೇಶ ತಿಂಗಿ ತನಿಖೆ ಪೂರ್ಣಗೊಳಿಸಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬೆಳಗಾವಿ, ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಪ್ರಕರಣದ ವಿಚಾರಣೆ ನಡೆಸಿದ್ದರು. ಪ್ರಕಾಶ ಸತ್ತೆಪ್ಪ ಮಗದುಮ ಆರೋಪಿ ಎಂದು ಸಾಬೀತಾಗಿದ್ದು, ಆತನಿಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸಂತ್ರಸ್ತೆಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ನಾಲ್ಕು ಲಕ್ಷ ರೂ. ಪರಿಹಾರ ಧನ ಪಡೆಯಲು ನ್ಯಾಯಾಲಯ ತಿಳಿಸಿದೆ. ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಐದು ವರ್ಷಗಳವರೆಗೆ ಠೇವಣಿಯಾಗಿ ಇಡಲು ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್. ವಿ. ಪಾಟೀಲ ಪ್ರಕರಣ ವಾದ ಮಂಡಿಸಿದ್ದರು.


Share It

You cannot copy content of this page