ಬೆಂಗಳೂರು: ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ KSRTC ಚಾಲಕ ರಾಜೀವ್ ಬೀರಸಾಲ ಸಾವಿಗೆ ಸಚಿವ ರಾಮಲಿಂಗಾ ರೆಡ್ಡಿ ಕಂಬನಿ ಮಿಡಿದಿದ್ದಾರೆ.
ಮೃತ ಚಾಲಕರ ಆತ್ಮಕ್ಕೆ ಶಾಂತಿ ಕೋರುತ್ತಾ, ಮೃತ ಕುಟುಂಬದವರಿಗೆ ಸಾಂತ್ವನ ತಿಳಿಸಿ, ಅತೀ ಶೀಘ್ರದಲ್ಲಿ ಆತನ ಕುಟುಂಬಕ್ಕೆ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನೀಡುವುದು ಹಾಗೂ ಇವರ ಅವಲಂಬಿತರಿಗೆ ನೌಕರಿಯನ್ನು ಕೂಡಲೇ ನೀಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.
ಚಾಲಕ ರಾಜೀವ್ ಬೀರಸಾಲ ನಿಗಮದಲ್ಲಿ ಚಾಲಕ- ಕಂ-ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸುಮಾರು 56 ವರ್ಷ ವಯಸ್ಸಾಗಿತ್ತು. ಅವರು2005 ರಿಂದ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದು, ಹರಿಹರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಬೆಂಗಳೂರು – ದಾವಣಗೆರೆ ಮಾರ್ಗದಲ್ಲಿ ಕಾರ್ಯಚರಣೆ ಮಾಡುವಾಗ ನೆಲಮಂಗಲ ಟೋಲ್ ಹತ್ತಿರ ವಾಹನ ಚಾಲನೆ ಮಾಡುತ್ತಿದ್ದಾಗ ಹೃದಯಾಘಾತವಾಗಿತ್ತು.
ಆದರೂ ಬಸ್ಸಿನಲ್ಲಿರುವ ಪ್ರಯಾಣಿಕರನ್ನು ರಕ್ಷಿಸಿ, ಬಸ್ಸನ್ನು ಹೆದ್ದಾರಿಯ ಒಂದು ಬದಿಯಲ್ಲಿ ಪಕ್ಕಕ್ಕೆ ನಿಲ್ಲಿಸಿ, ಭಾರಿ ಅನಾಹುತವನ್ನು ತಪ್ಪಿಸಿ, ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿ ನೆಲಮಂಗಲ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದರು.