ರಾಯಚೂರು: ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ ಓರ್ವ ಪ್ರಯಾಣಿಕನ ಕಾಲು ಮುರಿದು, ೧೫ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ರಾಯಚೂರು ಹೊರವಲಯದ ಸಾಥಮೈಲ್ ಕ್ರಾಸ್ ಹತ್ತಿರ ಇಂದು ಬೆಳಗ್ಗೆ ನಡೆದಿದೆ.
ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ಬಸ್ ಇದಾಗಿದ್ದು, ಏಕಾಏಕಿ ನಾಯಿ ಅಡ್ಡಬಂದಿದ್ದನ್ನು ತಪ್ಪಿಸಲು ಹೋಗಿ ಚಾಲಕ ಬಸ್ ಅನ್ನು ಎಡಕ್ಕೆ ತಿರುವಿದ್ದಾನೆ. ಆಗ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿದೆ ಎಂದು ಹೇಳಲಾಗುತ್ತಿದೆ.
ಅಪಘಾತದಿಂದ ಓರ್ವ ಪ್ರಯಾಣಿಕನ ಕಾಲಿಗೆ ಹೆಚ್ಚು ಗಾಯವಾಗಿದೆ ಪೊಲೀಸರು, ಸ್ಥಳೀಯರ ಸಹಾಯದಿಂದ ಪ್ರಯಾಣಿಕನನ್ನು ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಅಲ್ಲದೇ ಬಸ್ನಲ್ಲಿದ್ದ ಸುಮಾರು ೧೫ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿ, ಜಿಟಿ ಜಿಟಿ ಮಳೆ ಮಧ್ಯೆಯೂ ಕಾರ್ಯಾಚರಣೆ ನಡೆಸಿದರು. ಪಲ್ಟಿಯಾದ ಬಸ್ ಅನ್ನು ಕ್ರೇನ್ ಸಹಾಯದಿಂದ ಮೇಲೆತ್ತಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.