ಅಪರಾಧ ಸುದ್ದಿ

8 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿದ ಹಂತಕನಿಗೆ ಮರಣದಂಡನೆಯ ಶಿಕ್ಷೆ

Share It

ಬೆಳಗಾವಿ : 8 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿದ ಹಂತಕನಿಗೆ ಜಿಲ್ಲಾ ಪೋಕ್ಸೊ ನ್ಯಾಯಾಲಯ ಶುಕ್ರವಾರ ಮರಣದಂಡನೆ ಶಿಕ್ಷೆ ಜಾರಿಗೊಳಿಸಿ ತೀರ್ಪು ನೀಡಿದೆ.

ಈ ಪ್ರಕರಣದ ಬಗ್ಗೆ ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಈಗ ಆರೋಪಿ ರಾಯಬಾಗ ತಾಲೂಕು ಪರಮಾನಂದವಾಡಿಯ ಭರತೇಶ ರಾವಸಾಬ ಮಿರ್ಜಿ (28) ಎಂಬಾತನಿಗೆ ಮರಣದಂಡನೆ ಶಿಕ್ಷೆ ಜಾರಿಯಾಗಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿ 2019ರ ಅಕ್ಟೋಬರ್ 15 ರ ಸಂಜೆ 5:30 ಕ್ಕೆ ತನ್ನ ಮನೆಯಿಂದ ಬಸವಣ್ಣ ದೇವರ ಗುಡಿಯ ಹತ್ತಿರ ಹೋಗಿ ಮರಳಿ ಬರುವಾಗ ಆರೋಪಿ, ಬಾಲಕಿಗೆ ಲೈಂಗಿಕ ದೌರ್ಜನ್ಯ ಮಾಡುವ ಉದ್ದೇಶದಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಬಾಲಕಿ ಚೀರಾಡಲು ಆರಂಭಿಸುತ್ತಿದ್ದಂತೆ ಆಕೆಯ ಕುತ್ತಿಗೆ ಹಿಚುಕಿ 20 ಕೆ.ಜಿ .ಅಂದಾಜಿನ ತೂಕದ ಕಲ್ಲನ್ನು ಕಟ್ಟಿ ಮನೆ ಹತ್ತಿರ ಇದ್ದ ಬಾವಿಯಲ್ಲಿ ಒಗೆದು ಬರ್ಬರವಾಗಿ ಕೊಲೆ ಮಾಡಿದ್ದ.

ದೂರುದಾರ ವ್ಯಕ್ತಿಗೆ ಬಾಲಕಿ ಒಬ್ಬಳೇ ಮಗಳು. ಇವರು ಹೊಲಕ್ಕೆ ಹೋಗಿ ಮರಳಿ ಮನೆಗೆ ಬಂದಾಗ ಅವರ ಪತ್ನಿ ಗಾಬರಿಯಿಂದ ನೀವು ಹೊಲಕ್ಕೆ ಹೋದ ನಂತರ ನಿಮ್ಮ ಹಿಂದೆ ಅಂಗಡಿಗೆ ಚಾಕೋಲೆಟ್ ತರುತ್ತೇನೆ ಎಂದು ಹೋದ ಮಗಳು ಇನ್ನೂ
ಮರಳಿ ಬಂದಿಲ್ಲ ಎಂದು ಹೇಳಿದ್ದಾರೆ.

ಆಗ ಮಗಳು ಸಹಪಾಠಿಗಳ ಜೊತೆ ಆಡುತ್ತಿದ್ದಾಳಾ ಎಂದು ಸಹಾ ಕೇಳಿದ್ದಾರೆ. ತನ್ನ ಮನೆ ಹತ್ತಿರ ಇರುವ ಅಂಗಡಿಗೆ ಹೋಗಿ ವಿಚಾರಿಸಿದ್ದಾರೆ‌. ಅಂಗಡಿಯವನು ನಿಮ್ಮ ಮಗಳು ಚಾಕೋಲೆಟ್ ತೆಗೆದುಕೊಂಡು ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ಬೇರೆ ಬೇರೆ ಸ್ಥಳ ಹಾಗೂ ಹೊಲಗದ್ದೆಗಳಲ್ಲಿ ಹುಡುಕಾಡಿದರೂ ಮಗಳು ಸಿಗಲಿಲ್ಲ. ನಂತರ ಕುಡಚಿ ಪೊಲೀಸ್ ಠಾಣೆಗೆ ಹೋಗಿ ಬಾಲಕಿಯ ತಂದೆ ದೂರು ನೀಡಿದ್ದರು. ಅದರಂತೆ ಪಿಎಸ್ ಐ ಜಿ.ಎಸ್.ಉಪ್ಪಾರ ಅವರು, ಮುಂದಿನ ತನಿಖೆಯನ್ನು ಪ್ರಾರಂಭಿಸಿದ್ದರು. ಅಪಹರಣವಾಗಿದ್ದ ಅವಳ ತಪಾಸಣೆಗೆ ಬೆಳಗಾವಿಯಿಂದ ಶ್ವಾನದಳ ಕರೆಸಲಾಗಿತ್ತು. ಶ್ವಾನದಳ ತಂಡದ ಸಿಬ್ಬಂದಿ ಮಲ್ಲಿಕಾರ್ಜುನ ಯಮಗಾರ ಮತ್ತು ಆರ್ .ಬಿ. ಗೌಡರ ಅವರು ಸೂಜಾ ಎಂಬ ಶ್ವಾನವನ್ನು ತಂದು ನೊಂದ ಬಾಲಕಿಗೆ ಸಂಬಂಧಿಸಿದ ಬಟ್ಟೆಗಳ ವಾಸನೆ ಕೊಡಿಸಿದ್ದರು. ಅದು ನೊಂದ ಬಾಲಕಿ ನಡೆದು ಹೋದ ದಾರಿ ಹಾಗೂ ಆರೋಪಿಯ ಮನೆ ಮುಂದೆ ನಿಂತು ಸುತ್ತಾಡಿ ಬಾವಿಯ ಕಡೆ ಹೋಗಿ ನಿಂತಿದೆ ಎಂದು ತಿಳಿದು ಬಂತು.

ಆದರೆ, ಆರೋಪಿ ಅಷ್ಟರಲ್ಲೇ ಮನೆಗೆ ಕೀಲಿ ಹಾಕಿಕೊಂಡು ಪರಾರಿ ಆಗಿದ್ದ. ನಂತರ ಪೊಲೀಸರು ಬಾವಿಯಲ್ಲಿ ಬೋರ್ ವೆಲ್ ರಿಪೇರಿ ಮಾಡುವ ಕ್ಯಾಮರಾವನ್ನು ಬಿಟ್ಟು ತಪಾಸಣೆ ಮಾಡಿದ್ದಾರೆ.

ಬಾವಿಯ ತುಂಬ ನೀರು ತುಂಬಿದ್ದು 6 ಮೋಟರ್ ಗಳ ಸಹಾಯದಿಂದ ಇಡೀ ರಾತ್ರಿ ತಪಾಸಣೆ ನಡೆಸಿದ ವೇಳೆ ಕೊನೆಗೂ ಬಾಲಕಿಯ ಶವ ಸಿಕ್ಕಿದೆ. ಏಣಿಯನ್ನು ಬಾವಿಯ ಕೆಳಗೆ ಇಳಿಸಿ ಶವವನ್ನು ತೆಗೆಯಲು ಹೋದಾಗ ಬಾಲಕಿಯ ಸೊಂಟಕ್ಕೆ ಕಟ್ಟಿದ ಸೀರೆಗೆ ಕಟ್ಟಿದ್ದ ಕಲ್ಲು ಬಿಚ್ಚಿ ತೆಗೆದು ಬಾಲಕಿಯ ಶವ ಗುರುತಿಸಿದ್ದರು.

ತನಿಖಾಧಿಕಾರಿಯವರು ಪಂಚನಾಮೆ ಮಾಡಿ ಪುರಾವೆಗಳು ಹಾಗೂ ಇತರ ವಸ್ತುಗಳ ಆಧಾರದ ಮೇಲೆ ಮತ್ತು ನೊಂದ ಬಾಲಕಿಯ ಶವ ಪರೀಕ್ಷೆಯನ್ನು ಡಾ. ಕೆ.ಎಸ್. ಗುರುದತ್ತ ವರದಿ ನೀಡಿದ್ದರು. ನ್ಯಾಯಾಲಯದಲ್ಲಿ ಶವ ಪರೀಕ್ಷೆಯ ಕಾಲಕ್ಕೆ ಕೊಲೆಗೆ ಸಂಬಂಧಿಸಿದ ಸುದೀರ್ಘ ಅಂಶಗಳ ಬಗ್ಗೆ ನ್ಯಾಯಾಲಯದಲ್ಲಿ ಸಾಕ್ಷಿ ಸಾಬೀತಾಗಿತ್ತು.

ತನಿಖಾಧಿಕಾರಿ ಜಿ.ಎಸ್.ಉಪ್ಪಾರ ಪ್ರಕರಣ ದಾಖಲಿಸಿದ್ದರು. ಮುಂದಿನ ದಿನಗಳಲ್ಲಿ ಎನ್.ಮಹೇಶ ಮತ್ತು ಕೆ.ಎಸ್.ಹಟ್ಟಿ ತನಿಖೆ ಮಾಡಿ ಮಾನ್ಯ ಹೆಚ್ಚುವರಿ ಜಿಲ್ಕಾ ಸತ್ರ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಮಾನ್ಯ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಪ್ರಕರಣ ವಿಚಾರಣೆ ಮಾಡಿ 20 ಸಾಕ್ಷಿಗಳ ವಿಚಾರಣೆ ಹಾಗೂ 106 ದಾಖಲೆ ಮತ್ತು 22 ಮುದ್ದೆಮಾಲುಗಳ ಆಧಾರದ ಮೇಲೆ ಆರೋಪಿ ಮೇಲಿನ ಆರೋಪ ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿ ಭರತೇಶ ರಾವಸಾಬ ಮಿರ್ಜಿಗೆ ಮರಣದಂಡದ ಶಿಕ್ಷೆ ವಿಧಿಸಿದ್ದಾರೆ.

ಕಾಲಂ 363 ರಡಿ 7 ವರ್ಷಗಳ ಶಿಕ್ಷೆ,ದಂಡ ರೂ.5000, ಕಲಂ 376 ರ ಪ್ರಕಾರ 10 ವರ್ಷಗಳ ಶಿಕ್ಷೆ ಮತ್ತು ದಂಡ ರೂಪವಾಗಿ 15 ಸಾವಿರ ರೂ. ಹಾಗೂ ಕಲಂ 201 ಸಾಕ್ಷಿ ನಾಶಕ್ಕೆ ಸಂಬಂಧಿಸಿ 7 ವರ್ಷಗಳ ಶಿಕ್ಷೆ ಮತ್ತು ದಂಡ ಹಾಗೂ ರೂ.5,000 ಹಾಗೂ ಪೋಕ್ಸೊ ಕಲಂ 4 ಮತ್ತು 6 ರಡಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ ರೂ.20,000 ದಂಡ ವಿಧಿಸಿದ್ದಾರೆ. ದಂಡವನ್ನು ತುಂಬದೇ ಇದ್ದ ಕಾಲಕ್ಕೆ ಒಂದು ವರ್ಷದ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ. ಮತ್ತು ಬಾಲಕಿಯ ತಂದೆ- ತಾಯಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 10 ಲಕ್ಷ ರೂ. ಪರಿಹಾರ ಪಡೆಯಲು ಮಾನ್ಯ ನ್ಯಾಯಾಲಯ ಆದೇಶ ಮಾಡಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್ .ವಿ. ಪಾಟೀಲ ಹಾಜರಾಗಿ ವಾದ ಮಂಡಿಸಿದ್ದರು.


Share It

You cannot copy content of this page