ಸುದ್ದಿ

Bangalore: ಮರ ಬಿದ್ದು ಯುವತಿ ಸಾವು

Share It

ಬೆಂಗಳೂರು: ಬೈಕ್ ಮೇಲೆ ಮರ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೆಬ್ಬಾಳ ನಿವಾಸಿ, 24 ವರ್ಷದ ಕೀರ್ತನಾ ಎಂಬುವಳೇ ಮೃತಪಟ್ಟ ಯುವತಿ. ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿ ಈ ಘಟನೆ ನಡೆದಿದ್ದು, ರಾತ್ರಿ 8 ಗಂಟೆ ಸುಮಾರಿಗೆ ರಸ್ತೆ ಮೇಲೆ ಏಕಾಏಕಿ ಬೃಹತ್ ಮರದ ಕೊಂಬೆ ಮುರಿದು ಬಿದ್ದಿದೆ.

ಬಿದ್ದ ರಭಸಕ್ಕೆ ಯುವತಿ ಸಾವನ್ನಪ್ಪಿದ್ದಾಳೆ. ಆಕೆ ಜೊತೆ ಇದ್ದ ಸ್ನೇಹಿತೆ ಬಚಾವ್ ಆಗಿದ್ದಾಳೆ. ಮತ್ತೊಂದೆಡೆ ಇನ್ನೊಂದು ಬೈಕ್‌ನಲ್ಲಿದ್ದ ಬೈಕ್ ಸವಾರನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಚಾರ್ಯ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸ್ಯಾಂಡಲ್‌ವುಡ್ ಪ್ರೀಮಿಯರ್ ಲೀಗ್ ಮ್ಯಾಚ್ ನೋಡಿ ಕೊಂಡು ವಾಪಸ್ ಆಗುತ್ತಿದ್ದ ಗೆಳತಿಯರು, ಬೈಕ್‌ನಲ್ಲಿ ಹೆಬ್ಬಾಳ ಕಡೆಗೆ ಬರುತ್ತಿದ್ದರು.

ಈ ವೇಳೆ ಸೋಲದೇವಹನಳ್ಳಿ ಬಳಿ ಮರ ಮುರಿದು ಎರಡು ಬೈಕ್‌ಗಳ ಮೇಲೆ ಬಿದ್ದಿದೆ. ಬೃಹತ್ ಕೊಂಬೆ ಬಿದ್ದ ರಭಸಕ್ಕೆ ಬೈಕ್‌ನಲ್ಲಿದ್ದ ಕೀರ್ತನಾ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಆಕೆ ಜತೆ ಇದ್ದ ಸ್ನೇಹಿತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಆಕೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ರು. ಮತ್ತೊಂದೆಡೆ ಸ್ಥಳಕ್ಕೆ ಬಂದ ಅಧಿಕಾರಿಗಳು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ. ಸಿಬ್ಬಂದಿ ಬಂದಿದ್ದು, ಇಡೀ ಆಲದ ಮರವನ್ನು ತೆರವು ಮಾಡಲು ಮುಂದಾದ್ರು. ಹಳೆಯ ಮರ ಆಗಿರೋ ಕಾರಣದಿಂದ ಸಂಪೂರ್ಣ ಮರ ತೆರವಿಗೆ ಮುಂದಾಗಿದ್ದಾರೆ.


Share It

You cannot copy content of this page