ವೈಯಕ್ತಿಕ ಮಾಹಿತಿ ಕೇಳಲು ಹೋಗಬೇಡಿ: ಸಮೀಕ್ಷೆ ಮಾಡೋರಿಗೆ ಸಲಹೆ
ಬೆಂಗಳೂರು:”ಯಾರೇ ಏನೇ ಆಕ್ಷೇಪಣೆ ಮಾಡಿದರೂ ಸಮೀಕ್ಷೆ ನಡೆಯುತ್ತದೆ. ಇಷ್ಟವಿದ್ದ ಪ್ರಶ್ನೆಗೆ ಉತ್ತರಿಸಿ, ಇಲ್ಲದಿದ್ದರೆ ಬೇಡ ಎಂದು ನ್ಯಾಯಾಲಯವೇ ಹೇಳಿದೆ. ಸಮೀಕ್ಷೆಗೆ ವಿರೋಧ ಮಾಡುವುದು ಸರಿಯಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಬೆಳಿಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಈ ಹಿಂದಿನ ಗಣತಿ ಸರಿಯಿಲ್ಲ ಎಂದರು. ಅದಕ್ಕೆ ಹೊಸದಾಗಿ ಗಣತಿ ಮಾಡಲಾಗುತ್ತಿದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ” ಎಂದರು.
ಎರಡು ಮೂರು ದಿನಗಳಲ್ಲಿ ಸಮೀಕ್ಷೆ ಮುಗಿಯಲಿದೆಯೇ ಎಂದು ಕೇಳಿದಾಗ, “ಇದರ ಬಗ್ಗೆ ಸಂಬಂಧ ಪಟ್ಟ ಆಯೋಗದವರು ಆಲೋಚನೆ ಮಾಡುತ್ತಾರೆ” ಎಂದು ಉತ್ತರಿಸಿದರು.
ವೈಯಕ್ತಿಕ ಮಾಹಿತಿಗಳನ್ನು ಕೇಳಲು ಹೋಗಬೇಡಿ: “ಬೆಂಗಳೂರಿನ ನಾಗರೀಕರ ಬಳಿ ಕೋಳಿ, ಕುರಿ, ಒಡವೆ, ವಾಷಿಂಗ್ ಮೆಷಿನ್, ಫ್ರಿಜ್ಡ್ ಹಾಗೂ ಇತರೇ ವೈಯಕ್ತಿಕ ಮಾಹಿತಿಗಳನ್ನ ಕೇಳಲು ಹೋಗಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅವರುಗಳು ಏನು ಮಾಡುತ್ತಾರೋ ಗೊತ್ತಿಲ್ಲ” ಎಂದರು.