ಅಪರಾಧ ಸುದ್ದಿ

ದೇವಸ್ಥಾನದಲ್ಲಿ ಅರ್ಚಕರ ಹುಟ್ಟುಹಬ್ಬ ಆಚರಣೆ:  ವಿಚಾರಣೆ ನಡೆಸಿ ಕ್ರಮಕ್ಕೆ ಮುಜರಾಯಿ ಸಚಿವರ ಆದೇಶ

Share It

ಬೆಂಗಳೂರು: ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ದೇವಾಲಯದ ಅರ್ಚಕರ ಹುಟ್ಟುಹಬ್ಬ ಆಚರಿಸಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಟೋ ವೈರಲ್ ಆಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಆದೇಶ ನೀಡಿದ್ದಾರೆ.

ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ ಮಾಡುವ ಜತೆಗೆ ದೇವಾಲಯದಲ್ಲಿ‌ ಆ‌ ಸಂದರ್ಭದಲ್ಲಿ ‌ಯಾವುದೇ ಅನ್ಯ ಧರ್ಮೀಯರು ಭಾಗವಹಿಸಿರುವುದಿಲ್ಲ, ವಿನಾಕಾರಣ ಸುಳ್ಳು‌, ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸುದ್ದಿ  ಹರಡುವವರ ಬಗ್ಗೆ ಸಚಿವರು ಕಿಡಿಕಾರಿದ್ದಾರೆ.

ಕರ್ನಾಟಕ ಸರ್ಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಾಲಯವಾದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಹಲಸೂರಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಾನಕಿ ರಾಮ್ ರೆಡ್ಡಿ, ಪ್ರಧಾನ ಅರ್ಚಕ ಸುಂದರ್ ದಿಕ್ಷೀತ್ ಮತ್ತು ಸಹಾಯಕ ಆರ್ಚಕರೀತಿ.ಸುರೇಶ್ ದೀಕ್ಷಿತ್ ಕರ್ತವ್ಯ ನಿರ್ವಹಿಸುತ್ತಿದ್ದು, ಸಹಾಯಕ ಅರ್ಚಕರ ಜನ್ಮ ದಿನವಾಗಿದ್ದರಿಂದ ಅ.23 ರಂದು  ದೇವಾಲಯದ ಆವರಣದೊಳಗೆ,‌ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದರು ಎನ್ನಲಾಗಿದೆ.

ದೇವಾಲಯದ ಆವರಣದೊಳಗೆ ಯಾವುದೇ ವ್ಯಕ್ತಿಯ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಅವಕಾಶವಿರುವುದಿಲ್ಲ. ಆದರೆ, ಹುಟ್ಟುಹಬ್ಬ ಆಚರಿಸಿಕೊಂಡ ಛಾಯಾಚಿತ್ರಗಳು ವಾಟ್ಸಪ್‌ಗಳಲ್ಲಿ ಹರಿದಾಡಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಅರ್ಚಕರು ದೇವಸ್ಥಾನದಲ್ಲಿ ಈ ರೀತಿ ವರ್ತಿಸಿರುವುದರಿಂದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದರಿಂದ, ಈ ಬಗ್ಗೆ ಸೂಕ್ತ ವಿಚಾರಣೆ ಮಾಡಿ ಸಂಬಂಧಪಟ್ಟವರ‌ ಮೇಲೆ‌ ಸೂಕ್ತ ಕ್ರಮ ಜರುಗಿಸಲು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ.

ಕೆಲವೊಂದು ಜಾಲತಾಣಗಳಲ್ಲಿ ಈ‌ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಿಂದೂ ಧರ್ಮದವರನ್ನು ಹೊರತುಪಡಿಸಿ, ಅನ್ಯ ಧರ್ಮದವರು ಭಾಗವಹಿಸಿದ್ದರು ಎಂಬ ವಿಷಯ ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ  ಪ್ರಾಥಮಿಕ ವಿಚಾರಣೆ ನಡೆಸಲಾಗಿದ್ದು, ಇದು ಸಂಪೂರ್ಣ ಸುಳ್ಳು ಹಾಗೂ ದುರುದ್ದೇಶದಿಂದ ಕೂಡಿರುವುದು ಎಂದು ಕಂಡು ಬಂದಿದೆ.


Share It

You cannot copy content of this page