ಅಪರಾಧ ಸುದ್ದಿ

ಪತ್ನಿ ಕೊಲೆಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬೆಳಗಾವಿ ನ್ಯಾಯಾಲಯ

Share It

ಬೆಳಗಾವಿ : ಪತ್ನಿಯನ್ನು ಕೊಲೆಗೈದ ಪತಿಗೆ ಬೆಳಗಾವಿಯ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ.50 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಮೂಲತಃ ವಿಜಯಪುರ ಜಿಲ್ಲೆ ತಾಳಿಕೋಟಿಯ
ಪರಶುರಾಮ ಗಣಪತಿ ಪೀಸೆ(40)ಶಿಕ್ಷೆಗೊಳಗಾದ ಆರೋಪಿ. ಬೆಳಗಾವಿಯ ವಿಜಯನಗರ ಅತವಾಡಕರ್ ಲೇಔಟ್ ನ ಪ್ಲಾಟ್ ನಂ.123 ರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

2020 ರ ಫೆಬ್ರವರಿ 13 ರಂದು ಮಧ್ಯಾಹ್ನ 1 ರಿಂದ 1.30 ರ ಸುಮಾರಿಗೆ ಈತ ತನ್ನ ಪತ್ನಿ ಕವಿತಾ ಅವರೊಂದಿಗೆ ತನ್ನ ಸಣ್ಣ ಮಕ್ಕಳನ್ನು ಎತ್ತಿಕೊಳ್ಳುವ ವಿಚಾರದಲ್ಲಿ ತಂಟೆ ತೆಗೆದು ಅದೇ ಸಿಟ್ಟಿನಿಂದ ಅವರ ಕುತ್ತಿಗೆ ಹಿಚುಕಿ ಉಸಿರುಗಟ್ಟಿಸಿ ಕೊಲೆಗೈದಿದ್ದ. ಈ ಬಗ್ಗೆ ಕವಿತಾ ಅವರ ತಂದೆ ಕಲಬುರ್ಗಿಯ ಸುನಿಲ್ ಕುಮಾರ್ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಈ ಪ್ರಕರಣದ ತನಿಖೆ ನಡೆಸಿದ ಅಂದಿನ ಕ್ಯಾಂಪ್ ಪೊಲೀಸ್ ಠಾಣೆಯ ಪಿ ಐ ಡಿ.ಸಂತೋಷ ಕುಮಾರ್ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ಐದನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್. ಎಸ್. ಮಂಜುನಾಥ ಅವರು ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರಕಾರದ ಪರ ಸರ್ಕಾರಿ ಅಭಿಯೋಜಕ ಐ.ಎಂ.ಮಠಪತಿ ವಾದ ಮಂಡಿಸಿದ್ದರು.


Share It

You cannot copy content of this page