ನವದೆಹಲಿ: ಅಹಮದಾಬಾದ್ ನಲ್ಲಿ ದೃಶ್ಯ ಸಿನಿಮಾ ಮಾದರಿಯ ಕೊಲೆಯೊಂದು ನಡೆದಿದ್ದು, ಶವವನ್ನು ಅಡುಗೆ ಮನೆಯಲ್ಲಿಯೇ ಹೂತಿಟ್ಟಿದ್ದ ಪ್ರಕರಣ ಒಂದು ವರ್ಷದ ನಂತರ ಬೆಳಕಿಗೆ ಬಂದಿದೆ.
ಅಹಮದಾಬಾದ್ ನಗರದ ಉದ್ಯಮಿ ಅನ್ಸಾರಿ ಎಂಬಾತ ಕಳೆದ ಒಂದು ವರ್ಷದ ಹಿಂದೆ ಕೊಲೆಯಾಗಿದ್ದು, ಪತ್ನಿಯೇ ತನ್ನ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿ ಶವವನ್ನು ಅಡುಗೆ ಮನೆಯ ಫ್ಲೋರ್ ನಲ್ಲಿ ಹೂತಿಟ್ಟು, ಸಿಮೆಂಟ್ ನಿಂದ ಮುಚ್ಚಿದ್ದರು. ಅನಂತರ ಆಕೆ ಅದೇ ಮನೆಯಲ್ಲಿ ತನ್ನ ಇಬ್ಬರು ಮಕ್ಕಳ ಜತೆಗೆ ವಾಸ ಮಾಡುತ್ತಿದ್ದು, ತನ್ನ ಗಂಡ ಕೆಲಸದ ಮೇಲೆ ಬೇರೆ ಕಡೆ ಹೋಗಿರುವುದಾಗಿ ಹೇಳಿಕೊಂಡಿದ್ದಳು.
ಆದರೆ, ಆಕೆ ಇಮ್ರಾನ್ ಎಂಬ ಮತ್ತೊಬ್ಬ ವ್ಯಕ್ತಿಯ ಜತೆಗೆ ವಿವಾಹೇತರ ಸಂಬಂಧ ಹೊಂದಿದ್ದು, ಆಕೆಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಇದರಿಂದ ಅನುಮಾನಗೊಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಇಮ್ರಾನ್ ನನ್ನು ವಿಚಾರಣೆ ನಡೆಸಿದಾಗ ಆತ ಆಕೆಯೊಂದಿಗಿದ್ದ ಸಂಬಂಧ ಹಾಗೂ ಆಕೆಯ ಜತೆ ಸೇರಿ ಅನ್ಸಾರಿಯನ್ನು ಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಶವವನ್ನು ಅಡುಗೆ ಮನೆಯ ಟೈಲ್ಸ್ ಕೆಳಗೆ ಹೂತಿಟ್ಟಿದ್ದನ್ನು ತೋರಿಸಿದ್ದಾರೆ.
ಅಷ್ಟರಲ್ಲಾಗಲೇ ರೂಬಿ, ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದು, ಮನೆಯ ಬೀಗ ಹೊಡೆದು ಪೊಲೀಸರು ಶವವನ್ನು ಹೊರತೆಗೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಪರಾರಿಯಾಗಿರುವ ರೂಬಿ ಮತ್ತು ಕೊಲೆಗೆ ಸಹಾಯ ಮಾಡಿದ ಇಮ್ರಾನ್ ನ ಇಬ್ಬರು ಸಂಬಂಧಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

