ತುಮಕೂರು: ನಂದಿನಿ ಲಿಟರ್ ಹಾಲಿಗೆ 5 ರೂ ಹೆಚ್ಚಳ ಮಾಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರೈತರಿಗೆ ಹಾಲಿನ ದರ ಹೆಚ್ಚಳ ಮಾಡಿದ ಸಂಪೂರ್ಣ ಹಣವನ್ನು ವರ್ಗಾಯಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚಿಸಿದ್ದು, ಬೆಲೆ ಹೆಚ್ಚಳ ಮಾಡಲು ಸಮ್ಮತಿಸಿದ್ದಾರೆ ಎಂದು ತಿಳಿಸಿದರು.
ಬೇರೆ ರಾಜ್ಯದಲ್ಲೂ ಇಷ್ಟೊಂದು ಕಡಿಮೆ ಬೆಲೆ ಹಾಲು ಖರೀದಿಸುತ್ತಿಲ್ಲ ಹಾಗೂ ಗ್ರಾಹಕರಿಗೆ ಮಾರಾಟ ಮಾಡುತ್ತಿಲ್ಲ. ನಮ್ಮ ರಾಜ್ಯದಲ್ಲೇ ಅತಿ ಕಡಿಮೆ ಕಡಿಮೆ ಬೆಲೆಗೆ ಹಾಲು ಖರೀದಿಸಲಾಗುತ್ತಿದೆ. ರೈತರಿಗೆ ನೆರವಾಗುವ ದೃಷ್ಟಿಯಿಂದ ಹಾಲು ಖರೀದಿ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದರು.
ಹಾಲು ದರ ಹೆಚ್ಚಳ ಮಾಡುವುದರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಲಾಭವಾಗುವುದಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ ವಹಿವಾಟು ಹೆಚ್ಚಾದರೆ ಆದಾಯ ತೆರಿಗೆ ಪಾವತಿಸಲಾಗುತ್ತದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.