ನ್ಯೂಸ್ ಚಾನೆಲ್ ಕ್ಯಾಮೆರಾಮೆನ್ ಆತ್ಮಹತ್ಯೆ : ಸಾಲಗಾರರ ಕಿರುಕುಳದ ಬೆನ್ನತ್ತಿದ್ದ ಪೊಲೀಸರು
ಬೆಂಗಳೂರು: ಖಾಸಗಿ ಸುದ್ದಿವಾಹಿನಿಯೊಂದರ ಕ್ಯಾಮೆರಾ ಮೆನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಲೋನ್ ಆ್ಯಪ್ ಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಉತ್ತರ ತಾಲೂಕಿನ ಗೊಲ್ಲರಹಟ್ಟಿಯ ನಿವಾಸದಲ್ಲಿ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಿರಣ್ ಕಳೆದ ಹತ್ತು ವರ್ಷದಿಂದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಕ್ಯಾಮೆರಾ ಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಲೋನ್ ಆ್ಯಪ್ ವೊಂದರಲ್ಲಿ ಸಾಲ ಪಡೆದಿದ್ದರು. ಸಾಲ ಕಟ್ಟಲು ವಿಪರೀತ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಸಾಲ ಕಟ್ಟದಿದ್ದರೆ, ನಗ್ನ ಚಿತ್ರವನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದರು. ನಗ್ನ ಚಿತ್ರಗಳನ್ನು ಎಡಿಟ್ ಮಾಡಿ, ಕಳುಹಿಸಿ, ಇದೆಲ್ಲವನ್ನೂ ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.