ಎಚ್.ಟಿ. ಕೃಷ್ಣಪ್ಪರ ಭವಿಷ್ಯವಾಣಿ ಪ್ರಸ್ತಾಪಿಸಿದ ಸಿಎಂ; ಅಷ್ಟಕ್ಕೂ ಆ ಭವಿಷ್ಯವೇನು?
ಬೆಂಗಳೂರು: ಹಾಸನದಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಟುಂಬದ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಈ ವೇಳೆ ಅವರು ಪ್ರಸ್ತಾಪಿಸಿದ ಭವಿಷವಾಣಿ ಇದೀಗ ಚರ್ಚೆಗೆ ಕಾರಣವಾಗಿದೆ.
ತಮ್ಮ ಭಾಷಣದಲ್ಲಿ ದೇವೇಗೌಡರು ಅನೇಕರ ರಾಜಕೀಯ ಜೀವನದ ಅಂತ್ಯಕ್ಕೆ ಕಾರಣವಾಗಿದ್ದು, ಇದೀಗ ಅವರು ರಾಜಕೀಯ ಜೀವನದ ದುರಂತಗಳನ್ನು ಕಾಣುತ್ತಿದ್ದಾರೆ. ಇದಕ್ಕೆಲ್ಲ ಹಿಂದಿನವರ ಶಾಪವೇ ಕಾರಣ ಎಂಬುದು ಸಿದ್ದರಾಮಯ್ಯ ಅವರ ಮಾತಾಗಿತ್ತು.
ಇದೀಗ ದೇವೇಗೌಡರ ಬಗ್ಗೆ ಎಚ್.ಟಿ. ಕೃಷ್ಣಪ್ಪ ಅವರು 2010 ರಲ್ಲಿ ಬರೆದಿದ್ದರು ಎನ್ನಲಾದ ಭವಿಷ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಪ್ರಕಾರ, ‘ನಮಗೆಲ್ಲ ರಾಜಕೀಯ ವನವಾಸ ತಂದ ದೇವೇಗೌಡ ತನ್ನ ದುರಂತಗಳನ್ನು ತಾನೇ ನೋಡುವ ಕಾಲ ಬರುತ್ತದೆ’ ಎಂದು ಬರೆದಿದ್ದಾರೆ.
ಇದೀಗ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ರಾಜಕೀಯ ಪತನ ಶುರುವಾಗಿದೆ ಎಂಬುದು ಸಿದ್ದರಾಮಯ್ಯ ಅವರ ವ್ಯಾಖ್ಯಾನವಾಗಿದೆ. ದೇವೇಗೌಡರು ಸ್ವತಃ ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತರು, ನಂತರ ಅವರ ಮಗ ರೇವಣ್ಣರ ಇಡೀ ಕುಟುಂಬ ಜೈಲು ಸೇರಿತ್ತು.
ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ಮೂರನೇ ಬಾರಿಗೆ ಸೋಲು ಕಂಡಿದ್ದು, ರಾಮನಗರ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬದ ಪ್ರಾಬಲ್ಯ ನಾಲ್ಕು ದಶಕದ ನಂತರ ಅಂತ್ಯಗೊಂಡಿದೆ. ಇದೀಗ ಹಾಸನದಲ್ಲಿಯೂ ದೇವೇಗೌಡರ ಕುಟುಂಬದ ಪ್ರಾಬಲ್ಯವನ್ನು ಅಂತ್ಯಗೊಳಿಸುವ ಗುರಿಯನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ.