ಉಪಯುಕ್ತ ಸುದ್ದಿ

ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು: ಸುರೇಶ್

Share It

ಬಳ್ಳಾರಿಯಲ್ಲಿ ನಗರಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ: ಕಲುಷಿತ ನೀರು ಪೂರೈಸಿದರೆ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ

ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ಸರ್ಕಾರಿ ಜಾಗ, ರಸ್ತೆ ಮತ್ತು ಉದ್ಯಾನಗಳ ಒತ್ತುವರಿಯನ್ನು ಒಂದು ತಿಂಗಳೊಳಗಾಗಿ ತೆರವುಗೊಳಿಸಬೇಕೆಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ನಗರಾಭಿವೃದ್ಧಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು ಕುಂದುಕೊರತೆಗಳನ್ನು ಆಲಿಸಿದರು.
ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಗರದಲ್ಲಿ ಪಾರ್ಕ್, ರಸ್ತೆ ಮತ್ತು ಸರ್ಕಾರಿ ಜಾಗದ ಒತ್ತುವರಿಯಾಗಿ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ, ಅಂತಹ ಒತ್ತುವರಿ ಪ್ರಕರಣಗಳನ್ನು ಪತ್ತೆ ಮಾಡಿ ಒಂದು ತಿಂಗಳೊಳಗಾಗಿ ಆ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ತಿಳಿಸಿದರು.

ಸರ್ಕಾರಿ ಜಾಗವನ್ನು ಭೂಗಳ್ಳರಿಂದ ರಕ್ಷಿಸಿಕೊಳ್ಳಲು ಅನುವಾಗುವ ರೀತಿಯಲ್ಲಿ ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ಸಮರ್ಥರಿರುವ ವಕೀಲರನ್ನು ನೇಮಕ ಮಾಡಿಕೊಳ್ಳಬೇಕೆಂದು ಅವರು ಸೂಚನೆ ನೀಡಿದರು.

ಅಧಿಕಾರಿಗಳು ಹೊಣೆ: ನಗರದೆಲ್ಲೆಡೆ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ಕಲುಷಿತ ನೀರು ಪೂರೈಕೆ ಪ್ರಕರಣಗಳು ಕಂಡುಬಂದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವ ಬೈರತಿ ಸುರೇಶ್ ಅವರು ಎಚ್ಚರಿಕೆ ನೀಡಿದರು.
ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಸೂಚನೆ
ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಗಮನಹರಿಸಬೇಕು. ಕಟ್ಟುನಿಟ್ಟಾಗಿ ವಾಣಿಜ್ಯ ಕಟ್ಟಡಗಳಿಂದ ತೆರಿಗೆ ವಸೂಲು ಮಾಡಬೇಕು. ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ವಾಣಿಜ್ಯ ಮತ್ತು ಕಟ್ಟಡ ಪರವಾನಗಿಯನ್ನು ತ್ವರಿತವಾಗಿ ವಿತರಣೆ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಅಮೃತ್ 2.0 ಯೋಜನೆಯಡಿ ಉದ್ಯಾನಗಳು ಮತ್ತು ಕೆರೆಗಳನ್ನು ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇ-ಖಾತಾ ಅಭಿಯಾನವನ್ನು ಇನ್ನಷ್ಟು ಸಮರ್ಪಕವಾಗಿ ಜನರಿಗೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದರು.

ಪ್ರತಿಯೊಬ್ಬ ಅಧಿಕಾರಿಯೂ ವಾರ್ಡ್ ಗಳಿಗೆ ಭೇಟಿ ನೀಡಿ ನಾಗರಿಕರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳಬೇಕು. ಹೀಗೆ ಯಾವ ವಾರ್ಡಿಗೆ ಭೇಟಿ ನೀಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಯುಕ್ತರನ್ನು ಒಳಗೊಂಡ ವಾಟ್ಸಪ್ ಗ್ರೂಪ್ ಆರಂಭಿಸಬೇಕು ಮತ್ತು ಆಯಾ ವಾರ್ಡ್ ನ ಜನಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ಯಬೇಕು ಎಂದು ಸೂಚನೆ ನೀಡಿದರು.

ಬೀದಿ ನಾಯಿ ನಿಯಂತ್ರಣಕ್ಕೆ ಸಂತಾನ ನಿಯಂತ್ರಣ ಲಸಿಕೆ ಹಾಕಿಸಬೇಕು ಮತ್ತು ಬಿಡಾಡಿ ದನಗಳನ್ನು ಗೋಶಾಲೆಗೆ ಹಾಕಬೇಕು. ಇಂದಿರಾ ಕ್ಯಾಂಟೀನ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಸಚಿವ ಬೈರತಿ ಸುರೇಶ್ ಸೂಚನೆ ನೀಡಿದರು.

ಮಾಸ್ಟರ್ ಪ್ಲಾನ್ ಗೆ ಸೂಚನೆ: ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಆದಷ್ಟೂ ಬೇಗ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಅನುಮೋದನೆ ಪಡೆದುಕೊಳ್ಳಬೇಕು. 127 ಕೋಟಿ ರೂಪಾಯಿ ವೆಚ್ಚದಲ್ಲಿ ಎಂಜಿಎನ್ ವಿವೈ ಕಾಮಗಾರಿಗಳನ್ನು ಕೈಗೊಳ್ಳಬೇಕು. ಆಲಪುರ ಕೆರೆ ಮತ್ತು ಬಂಡಿಕೆರೆಯನ್ನು 25 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಬೇಕು. ನಗರಾಭಿವೃದ್ಧಿ ಪ್ರಾಧಿಕಾರದಿಂದ 200 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಬಡಾವಣೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


Share It

You cannot copy content of this page