ಬೆಂಗಳೂರು : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪತ್ಯೇಕಿಸಿ 2 ಮಹಾನಗರ ಪಾಲಿಕೆಗಳನ್ನಾಗಿ ಮಾಡುವ ಕುರಿತು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ. ಎಸ್. ಸುರೇಶ (ಬೈರತಿ)ಯವರ ಸಮ್ಮುಖದಲ್ಲಿ ಸಭೆ ಜರುಗಿತು.
ಧಾರವಾಡ ಕ್ಷೇತ್ರದ ಶಾಸಕರಾದ ವಿನಯ್ ಕುಲಕರ್ಣಿಯವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರ ನಿಯೋಗದೊಂದಿಗೆ ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶರವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕಿಸುವ ಸಂಬಂಧ ಮುಂದಿನ ಸಚಿವ ಸಂಪುಟಕ್ಕೆ ಕಡತವನ್ನು ಮಂಡಿಸಲು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರಿಗೆ ಸೂಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಹುಬ್ಬಳ್ಳಿ ಮತ್ತು ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆಗಳನ್ನಾಗಿಸಲು ಸಮ್ಮತಿಸಿದ್ದು, ಸಂಬಂಧಪಟ್ಟವರಿಗೆ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಬೈರತಿ ಸುರೇಶ ನಿಯೋಗಕ್ಕೆ ತಿಳಿಸಿದರು.
ತಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಕೂಡಲೇ ಸ್ಪಂದಿಸಿದ ಸಚಿವರ ಕಾರ್ಯವೈಖರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಅಭಿನಂದನೆ ಸಲ್ಲಿಸಿದರು.