ರಾಜಕೀಯ ಸುದ್ದಿ

ಬಿಜೆಪಿ ರಾಷ್ಟ್ರೀಯ ಕಾರ್ಯಾದ್ಯಕ್ಷರಾಗಿ ಬಿಹಾರ ಸಚಿವ ನಿತಿನ್ ನಬಿನ್ ಆಯ್ಕೆ: ನಡ್ಡಾ ಉತ್ತರಾಧಿಕಾರಿಯಾಗ್ತಾರಾ ನಿತಿನ್?

Share It

ನವದೆಹಲಿ: ಬಿಹಾರದ ಸಚಿವ ನಿತಿನ್ ನಬಿನ್ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಭಾನುವಾರ ನೇಮಿಸಲಾಗಿದ್ದು, ಇವರನ್ನೇ ಮುಂದಿನ ರಾಷ್ಟ್ರಾಧ್ಯಕ್ಷ ಎಂದು ಹೇಳಲಾಗುತ್ತಿದೆ..

ನಿತಿನ್ ಜೆ.ಪಿ.ನಡ್ಡಾ ಅವರ ನಂತರದ ರಾಷ್ಟ್ರೀಯ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಈ ಮೂಲಕ ಕೇಸರಿ ಪಡೆ ಹೊಸ ಪೀಳಿಗೆಯ ನಾಯಕತ್ವಕ್ಕೆ ತನ್ನನ್ನು ತೆರೆದುಕೊಂಡಂತಿದೆ. 45 ವರ್ಷದ ನಬಿನ್ ಅವರು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರ. ಐದು ಬಾರಿ ಶಾಸಕರಾಗಿರುವ ನಿತಿನ್​ ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ಬಿಹಾರ ಸರ್ಕಾರದಲ್ಲಿ ಎರಡು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. “ಬಿಹಾರದಲ್ಲಿ ಸಚಿವರಾಗಿ ಮತ್ತು ಛತ್ತೀಸ್‌ಗಢದ ಉಸ್ತುವಾರಿಯಾಗಿ ನಿರ್ವಹಿಸಿದ ಕಾರ್ಯಗಳು ಅವರನ್ನು ಈ ಹಂತಕ್ಕೆ ಕರೆತಂದಿದೆ. ಬಿಜೆಪಿ ಸಂಸದೀಯ ಮಂಡಳಿ ನಿತಿನ್ ನಬಿನ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.

ನಿತಿನ್ ಅವರು ಕಾಯಸ್ಥ ಸಮುದಾಯಕ್ಕೆ ಸೇರಿದ ನಾಯಕ, ಇವರು ಹಾಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಯಿದೆ. ಹಾಗೊಂದು ವೇಳೆ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾದಲ್ಲಿ ಈ ಹುದ್ದೆ ಪಡೆದ ಅತ್ಯಂತ ಕಿರಿಯ ನಾಯಕರಲ್ಲಿ ಒಬ್ಬರಾಗಲಿದ್ದಾರೆ.

ಜೆ.ಪಿ.ನಡ್ಡಾ ಅವರನ್ನು 2020ರ ಜನವರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2024ರಲ್ಲಿ ಅವರ ಅವಧಿ ಪೂರ್ಣಗೊಂಡಿತ್ತು. ಆದರೆ, ಲೋಕಸಭಾ ಚುನಾವಣೆ, ವಿವಿಧ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ಮುಂದುವರಿಸಲಾಗಿತ್ತು.


Share It

You cannot copy content of this page