ರಾಷ್ಟ್ರಪತಿ ದ್ರೌಪದಿ ಮರ್ಮ ಅವರ ಡೀಪ್ ಫೇಕ್ ವಿಡಿಯೋ : ಬೆಂಗಳೂರು ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು
ಬೆಂಗಳೂರು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಡೀಪ್ ಫೇಕ್ ವಿಡಿಯೋ ಮೂಲಕಹಣಕಾಸು ಯೋಜನೆಯಲ್ಲಿ ಹಣ ಹೂಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿದ್ದ ಫೇಸ್ ಬುಕ್ ಪೇಜ್ ಲಿಂಕ್ ಅನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪತ್ತೆ ಹಚ್ಚಿದ್ದು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಅಪರಿಚಿತ ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಠಾಣೆಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರ್ ವಿಂಗ್ (ಎಸ್ಎಂಎಂಸಿ) ಉಸ್ತುವಾರಿ ಪಿಎಸ್ಐ ರಾಕೇಶ್, ಇತ್ತೀಚೆಗೆ ಫೇಸ್ ಬುಕ್ ಖಾತೆ ನೋಡುತ್ತಿರುವಾಗ ಡುನ್ ಡ್ರೀಮ್ ಹೆಸರಿನಲ್ಲಿ ದ್ರೌಪದಿ ಮುರ್ಮು ಅವರು ಹಣಕಾಸು ಯೋಜನೆ ಉದ್ದೇಶಿಸಿ ಮಾತನಾಡುತ್ತಿರುವ ನಕಲಿ ವಿಡಿಯೋ ಕಂಡು ಬಂದಿತ್ತು. ಈ ಡೀಪ್ ಫೇಕ್ ವಿಡಿಯೊದಲ್ಲಿ ಹಣ ಹೂಡಿದರೆ ಕೆಲಸ ಮಾಡದೇ ಮನೆಯಲ್ಲಿಯೇ ಕುಳಿತು ಹೆಚ್ಚಿನ ಲಾಭ ಮಾಡಬಹುದು ಎಂದು ಹೇಳಿದ್ದರು.
ಇದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ಇದು ನಕಲಿ ವಿಡಿಯೋ ಎಂದು ಕಂಡುಬಂದಿತ್ತು. ಇದು ಎಐ ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಎಂಬುದು ಗೊತ್ತಾಗಿದೆ. ಆಮಿಷವೊಡ್ಡುವ ವಿಡಿಯೋ ನೋಡುವ ಸಾರ್ವಜನಿಕರು ಹಣದ ಆಸೆಗಾಗಿ ಆರ್ಥಿಕ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಮನಗಂಡು ಕೂಡಲೇ ಫೇಸ್ ಬುಕ್ ಲಿಂಕ್ ಡಿಲೀಟ್ ಮಾಡಿಸಲಾಗಿದೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


