ಶೀಘ್ರವೆ ಚಿಕ್ಕೋಡಿ ಜಿಲ್ಲೆ ರಚನೆಗೆ ಅಧಿಸೂಚನೆ: ಕಾನೂನು ಸಚಿವರಿಂದ ಮಹತ್ವದ ಮಾಹಿತಿ
ಚಿಕ್ಕೋಡಿ: “ಚಿಕ್ಕೋಡಿ ಜಿಲ್ಲಾ ರಚನೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಿಲ್ಲಾ ಉಸ್ತುವಾರಿಗಳೊಂದಿಗೆ ಸಭೆ ಮಾಡಿದ್ದಾರೆ. ಮುಂದಿನ ಹೆಜ್ಜೆಗಳನ್ನಿಡಲು ಬೇಗ ಪ್ರಕ್ರಿಯೆ ಆರಂಭವಾಗಬಹುದು” ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಚಿಕ್ಕೋಡಿ ನ್ಯಾಯಾಲಯದ ನೂತನ ಕಟ್ಟಡ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಿಎಂ ಸಿದ್ದರಾಮಯ್ಯನವರು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಭೆ ಮಾಡಿದ್ದಾರೆ. ಸಚಿವರೂ ಕೂಡ ಚಿಕ್ಕೋಡಿ, ಬೆಳಗಾವಿ, ಗೋಕಾಕ್ ಜನರೊಂದಿಗೆ ಸಭೆ ನಡೆಸಿದ್ದಾರೆ” ಎಂದರು.
ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಅವರು ಬೆಳಗಾವಿ ಡಿಸಿ ವಿರುದ್ಧ ಲೋಕಸಭಾ ಸ್ಪೀಕರ್ಗೆ ದೂರು ನೀಡಿರುವ ವಿಚಾರಕ್ಕೆ, “ಎಲ್ಲೂ ಇಲ್ಲದ ಗೊಂದಲವನ್ನು ಸೃಷ್ಟಿ ಮಾಡಲು ಏಕೆ ಹೊರಟಿದ್ದೀರಿ?. ಕನ್ನಡಿಗರು ಮರಾಠಿಗರು ಸಹೋದರರಂತೆ ಸಹಬಾಳ್ವೆಯಿಂದ ಇದ್ದೇವೆ. ಯಾಕೆ ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ?. ರಾಜಕೀಯ ಉದ್ದೇಶದಿಂದ ಗೊಂದಲ ಸೃಷ್ಟಿ ಮಾಡೋದು ಸೂಕ್ತವಲ್ಲ” ಎಂದು ಹೇಳಿದರು.
“800 ವರ್ಷಗಳ ಇತಿಹಾಸ ಇರುವ ಚಿಕ್ಕೋಡಿ ನ್ಯಾಯಾಲಯದ ಹೊಸ ಕಟ್ಟಡ ಉದ್ಘಾಟನೆ ಬಹಳ ಸಂತೋಷ ತಂದಿದೆ. ಈ ನ್ಯಾಯಾಲಯಕ್ಕೆ ಅಂಬೇಡ್ಕರ್ ಕೂಡ ಬಂದಿದ್ದರು. ಅವರು ನ್ಯಾಯಕ್ಕಾಗಿ ಹೋರಾಟ ಮಾಡಿರುವ ಇತಿಹಾಸ ಕೇಳಿದ್ದೇವೆ. ಈ ನ್ಯಾಯಾಲಯದ ಬಾರ್ ರಾಜ್ಯಕ್ಕೆ ಬಹು ದೊಡ್ಡ ಕೊಡುಗೆ ಕೊಟ್ಟಿದೆ. ವಿಧಾನಸಭೆ ಸ್ಪೀಕರ್ ಕಟಾವಳಿ ಹೆಸರು ನೆನಪಿಗೆ ಬರುತ್ತದೆ” ಎಂದರು.


