ಅನ್ಯಜಾತಿಯ ಯುವಕನೊಂದಿಗೆ ಪ್ರೀತಿಸಿ ಮದುವೆ: ಏಳು ತಿಂಗಳ ಗರ್ಭಿಣಿಯನ್ನು ಹೊಡೆದುಕೊಂದ ತಂದೆ
ಹುಬ್ಬಳ್ಳಿ: ಅನ್ಯಜಾತಿಯ ಯುವಕನೊಂದಿಗೆ ಪ್ರೀತಿಸಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನು ತಂದೆ ಹಾಗೂ ಕುಟುಂಬಸ್ಥರೇ ಹೊಡೆದು ಕೊಂದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ನಡೆದಿದೆ.
20 ವರ್ಷದ ಮಾನ್ಯ ಪಾಟೀಲ್ ಎಂಬಾಕೆ ಗ್ರಾಮದ ವಿವೇಕಾನಂದ ದೊಡ್ಡಮನಿ ಎಂಬ ಯುವಕನನ್ನು ಪ್ರೀತಿಸಿ, ಆತನೊಂದಿಗೆ ಎಂಟು ತಿಂಗಳ ಹಿಂದೆ ಕುಟುಂಬ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು. ಇದೀಗ ಆಕೆ ಏಳು ತಿಂಗಳ ಗರ್ಭಿಣಿಯಾದ ಕಾರಣಕ್ಕೆ ಯುವಕನ ಮನೆಗೆ ವಾಪಸ್ಸಾಗಿದ್ದರು. ಗ್ರಾಮಕ್ಕೆ ಬಂದ ವಿಷಯ ತಿಳಿಯುತ್ತಿದ್ದಂತೆ ಯುವತಿಯ ಕುಟುಂಬಸ್ಥರು, ಮನೆಗೆ ನುಗ್ಗಿ ಯುವತಿಯನ್ನು ಗರ್ಭಿಣಿಯೆಂಬುದನ್ನು ನೋಡದೆ ಥಳಿಸಿ, ಕೊಲೆ ಮಾಡಿದ್ದಾರೆ. ಯುವಕ ಹಾಗೂ ಆತನ ಕುಟುಂಬಸ್ಥರ ಮೇಲೆಯೂ ಹಲ್ಲೆ ನಡೆಸಿದ್ದಾರೆ.
ಮರ್ಯಾದೆಗೇಡು ಹತ್ಯೆ ನಡೆಸಿದ ಯುವತಿಯ ತಂದೆ ಪ್ರಕಾಶ್ ಗೌಡ ಪಾಟೀಲ್, ವೀರನಗೌಡ, ಅರುಣ್ ಗೌಡ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಜಾತಿಗಾಗಿ ಏಳು ತಿಂಗಳ ಗರ್ಭಿಣಿ ಮಗಳನ್ನೇ ಕೊಂದ ತಂದೆ ಮತ್ತು ಕುಟುಂಬಸ್ಥರ ಕ್ರೌರ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.


