ಉಪಯುಕ್ತ ಸುದ್ದಿ

ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದ ಸರಕಾರ : SSLC ಫಲಿತಾಂಶ ಹೆಚ್ಚಿಸಿದ ಶಿಕ್ಷಕರಿಗೆ ಪ್ರೋತ್ಸಾಹಧನ

Share It

ಬೆಂಗಳೂರು: SSLC ಫಲಿತಾಂಶ ಹೆಚ್ಚಳ ಮಾಡುವ ಸರಕಾರಿ ಶಾಲಾ ಶಿಕ್ಷಕರಿಗೆ ಸರಕಾರ ಗುಡ್ ನ್ಯೂಸ್ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರಿಗೆ ಸರ್ಕಾರ ವಿಶೇಷ ಪ್ರೋತ್ಸಾಹ ಧನವನ್ನು ಘೋಷಿಸಿದೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಪ್ರತಿಶತ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಫಲಿತಾಂಶ ಸುಧಾರಣೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಜಿಲ್ಲೆಗಳಲ್ಲಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಹೆಚ್ಚುವರಿಯಾಗಿ ಒಂದು ಸಾವಿರ ರೂಪಾಯಿ ನೀಡಲು ಸರ್ಕಾರ ಮುಂದಾಗಿದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಳಪೆ ಫಲಿತಾಂಶ ದಾಖಲಿಸಿದ್ದ ಇಲ್ಲಿನ ಜಿಲ್ಲೆಗಳಲ್ಲಿ ರಿಸಲ್ಟ್​ ಸುಧಾರಣೆ ಜತೆಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲೂ ಕನಿಷ್ಠ 40 ಅಂಕಗಳನ್ನು ಪಡೆಯುವಂತೆ ಶಿಕ್ಷಕರು ಸಿದ್ಧಗೊಳಿಸಬೇಕಿದೆ. ಇದಕ್ಕಾಗಿ ಅವರು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳಬೇಕಿದೆ. ಈ ಕುರಿತಂತೆ ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆಯನ್ನು ಸಹ ಹೊರಡಿಸಿದೆ.

ಮಕ್ಕಳು ಮತ್ತು ಶಿಕ್ಷಕರನ್ನು ಪ್ರೋತ್ಸಾಹಿಸಲು ಸರ್ಕಾರ ಈ ಘೋಷಣೆ ಮಾಡಿದೆ. ನಿಗದಿತ ಶಾಲಾ ಅವಧಿ ಮುಗಿದ ಬಳಿಕ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳ ಶಿಕ್ಷಕರು ವಿಶೇಷ ತರಗತಿ ಕೈಗೊಳ್ಳಬೇಕಿದೆ. ಈ ವೇಳೆ ವಿದ್ಯಾರ್ಥಿಗಳ ಬರವಣಿಗೆ ಕೌಶಲ್ಯ, ಪಾಠಗಳ ಪುನರಾವರ್ತನೆ ಮೂಲಕ ಅವರನ್ನು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಂತೆ ಮಾಡಬೇಕಿದೆ.

ಜನರಿಯಿಂದ ವಿಶೇಷ ತರಗತಿಗಳು ಆರಂಭ: ಹೊಸ ವರ್ಷ ಜನವರಿ 2026 ರಿಂದ ಪ್ರೌಢಶಾಲೆಗಳಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಮುಂದಿನ ಮೂರು ತಿಂಗಳ ಅವಧಿಗೆ ಶಿಕ್ಷಕರು ತೆಗೆದುಕೊಳ್ಳಬೇಕಿದೆ ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.


Share It

You cannot copy content of this page