ಬೆಂಗಳೂರು: ಚಿತ್ರದುರ್ಗದಲ್ಲಿ ನಡೆದ ಬಸ್ ಅಪಘಾತದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಇಬ್ಬರು ಯುವತಿಯರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ತಾಲೂಕಿನ ಅಂಕನಹಳ್ಳಿ ಗ್ರಾಮದ ನವ್ಯಾ, ಮಾನಸ ಎಂಬ ಯುವತಿಯರ ಬಗ್ಗೆ ಈವರೆಗೆ ಮಾಹಿತಿ ಸಿಕ್ಕಿಲ್ಲ. ಈ ಇಬ್ಬರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು ಎನ್ನಲಾಗಿದೆ. ಮೂವರು ಸ್ನೇಹಿತೆಯರು ಗೋಕರ್ಣಕ್ಕೆ ಹೊರಟಿದ್ದರು. ಇವರ ಪೈಕಿ ಒಬ್ಬಾಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಇಬ್ಬರು ಯುವತಿಯರ ಪತ್ತೆಯಾಗಿಲ್ಲ.
ಅಪಘಾತದಲ್ಲಿ ನಾಲ್ವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ದೊರೆತಿದೆ. ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. ಅವರು ಬೆಂಗಳೂರಿನಿಂದ ಗೋಕರ್ಣಕ್ಕೆ ಟಿಕೆಟ್ ಬುಕ್ ಮಾಡಿಸಿದ್ದು, ಬಸ್ ನಲ್ಲಿ ಇದ್ದರು ಎನ್ನಲಾಗಿದೆ.
ಆದರೆ, ಇದೀಗ ಮೂವರ ಮಾಹಿತಿ ಲಭ್ಯವಾಗುತ್ತಿಲ್ಲ. ಬಸ್ ನಲ್ಲಿ ಯಾವುದೇ ಅವಶೇಷಗಳು ಕೂಡ ಲಭ್ಯವಾಗಿಲ್ಲ. ಗಾಯಗೊಂಡಿರುವ 25 ಜನರಲ್ಲಿಯೂ ಈ ಇಬ್ಬರು ಯುವತಿಯರು ಇಲ್ಲ ಎನ್ನಲಾಗಿದೆ. ಹೀಗಾಗಿ, ಪೋಷಕರು ಮತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

