ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಹಣ ದುರ್ಬಳಕೆ:ನಾಲ್ವರ ವಿರುದ್ಧ ಎಫ್ ಐಆರ್ ದಾಖಲು
ಬೆಳಗಾವಿ: ಕಣಗಲಾ ಗ್ರಾಪಂ ಹದ್ದಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗಾಗಿ ಮಂಜೂರಾಗಿದ್ದ 1.50 ಲಕ್ಷ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ ಕಣಗಲಾ ಗ್ರಾಪಂ ಸದಸ್ಯ ಮಹಾದೇವ ಸಜ್ಜರಾವ್ ಸನ್ನಾಯಿಕ ಅವರು ನಾಲ್ವರ ವಿರುದ್ಧ ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2019-20ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಕಣಗಲಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲು 1.50 ಲಕ್ಷ ರೂ.ಅನುದಾನ ಬಿಡುಗಡೆಯಾಗಿತ್ತು. ಎಂಟು ಅಡಿ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ 2021ರ ಮಾ.25 ಕಕೆ ಟೆಂಡರ್ ಕರೆಯಲಾಗಿತ್ತು. ಆದರೆ ಪ್ರತಿಮೆ ನಿರ್ಮಿಸದೆ ಇಲಾಖೆಗೆ ಖೊಟ್ಟಿ ದಾಖಲೆಗಳನ್ನು ನೀಡಿ 1.47 ಲಕ್ಷ ರೂ. ಹಣ ದುರ್ಬಳಿಕೆ ಮಾಡಿಕೊಂಡಿದ್ದಾರೆ ಎಂದು ಕಣಗಲಾ ಗ್ರಾಪಂ ಸದಸ್ಯ ಮಹಾದೇವ ಸಜ್ಜರಾವ್ ಸನ್ನಾಯಿಕ ದೂರಿನಲ್ಲಿ ಆರೋಪಿಸಿದ್ದಾರೆ.
ಸದ್ಯ ಕಣಗಲಾ ಗ್ರಾಮ ಪಂಚಾಯಿತಿ ಪಿಡಿಒ ದಯಾನಂದ ನಾಯಕ, ಕಣಗಲಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ಸ೦ತೋಷ ವಾಯಿತ, ಜಿಲ್ಲಾ ಪಂಚಾಯಿತಿ ಸಹಾಯಕ ಅಭಿಯಂತ ರಾಜಕುಮಾರ ಶ್ರೀಖಾಂಡೆ ಹಾಗೂ ಜಿಲ್ಲಾ ಪಂಚಾಯಿತಿಯ ಕಾರ್ಯಕಾರಿ ಅಭಿಯಂತ ಅಡಿವೆಪ್ಪಾ ಪಟ್ಟಣಶೆಟ್ಟಿ ಅವರ ವಿರುದ್ಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

