ಧೀರೂಭಾಯಿ ಅಂಬಾನಿ ಜಯಂತಿ: ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿವೇತನ ಫಲಿತಾಂಶ ಪ್ರಕಟ

Share It

5,100 ಯುಜಿ–ಪಿಜಿ ವಿದ್ಯಾರ್ಥಿಗಳ ಆಯ್ಕೆ ಇದುವರೆಗೆ 33,000ಕ್ಕೂ ಹೆಚ್ಚು ವಿದ್ಯಾರ್ಥಿ ವೇತನಗಳು
ಮುಂಬೈ: ರಿಲಯನ್ಸ್ ಸಂಸ್ಥಾಪಕ ಹಾಗೂ ಮಾಜಿ ಅಧ್ಯಕ್ಷರಾದ ಧೀರೂಭಾಯಿ ಅಂಬಾನಿಯವರ 93ನೇ ಜಯಂತಿ ಹಿನ್ನೆಲೆಯಲ್ಲಿ ರಿಲಯನ್ಸ್ ಫೌಂಡೇಷನ್ 2025–26ನೇ ಶೈಕ್ಷಣಿಕ ಸಾಲಿನ ತನ್ನ ಪ್ರತಿಷ್ಠಿತ ಪದವಿ (UG) ಮತ್ತು ಸ್ನಾತಕೋತ್ತರ (PG) ವಿದ್ಯಾರ್ಥಿವೇತನಗಳ ಫಲಿತಾಂಶ ಪ್ರಕಟಿಸಿದೆ.

ಈ ವರ್ಷ ದೇಶಾದ್ಯಂತ 5,000 ಯುಜಿ ಹಾಗೂ 100 ಪಿಜಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಯುಜಿ ವಿದ್ಯಾರ್ಥಿಗಳಿಗೆ ಗರಿಷ್ಠ ₹2 ಲಕ್ಷ ಹಾಗೂ ಪಿಜಿ ವಿದ್ಯಾರ್ಥಿಗಳಿಗೆ ಗರಿಷ್ಠ ₹6 ಲಕ್ಷವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಇದು 2022ರಲ್ಲಿ ಘೋಷಿಸಿದಂತೆ, ಮುಂದಿನ 10 ವರ್ಷಗಳಲ್ಲಿ 50,000 ವಿದ್ಯಾರ್ಥಿ ವೇತನಗಳನ್ನು ನೀಡುವ ರಿಲಯನ್ಸ್ ಫೌಂಡೇಷನ್‌ನ ಬದ್ಧತೆಯ ಭಾಗವಾಗಿದೆ. ಇದುವರೆಗೆ ಫೌಂಡೇಷನ್ ಒಟ್ಟು 33,471 ವಿದ್ಯಾರ್ಥಿವೇತನಗಳನ್ನು ವಿತರಿಸಿದೆ.

ದೇಶಾದ್ಯಂತ ವ್ಯಾಪಕವಾಗಿ ಭಾಗಿ: 2025–26ನೇ ಸಾಲಿಗೆ ಆಯ್ಕೆ ಪ್ರಕ್ರಿಯೆ ಸ್ಪರ್ಧಾತ್ಮಕವಾಗಿತ್ತು. 1.25 ಲಕ್ಷಕ್ಕೂ ಹೆಚ್ಚು ಅರ್ಜಿಗಳಲ್ಲಿ ಆಯ್ಕೆಯಾದ 5,100 ವಿದ್ಯಾರ್ಥಿಗಳು 28 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿದ್ದು, 15,544 ಶೈಕ್ಷಣಿಕ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಈ ಯೋಜನೆಯ ಅಖಿಲ ಭಾರತ ಮಟ್ಟದ ಪಾಲ್ಗೊಳ್ಳುವಿಕೆಯನ್ನು ತೋರಿಸುತ್ತದೆ.

ರಿಲಯನ್ಸ್ ಫೌಂಡೇಷನ್‌ನ ವಕ್ತಾರರು ಹೇಳುವಂತೆ, “ಭಾರತದ ಯುವಜನತೆಯಲ್ಲಿ ಅಪಾರ ಪ್ರತಿಭೆ ಮತ್ತು ದೃಢ ಸಂಕಲ್ಪವಿದೆ. ನಮ್ಮ ವಿದ್ಯಾರ್ಥಿವೇತನಗಳು ಕೇವಲ ಆರ್ಥಿಕ ನೆರವಿಗೆ ಸೀಮಿತವಲ್ಲ; ಅವು ಮಾರ್ಗದರ್ಶನ (ಮೆಂಟರ್‌ಶಿಪ್), ಸಹಪಾಠಿಗಳ ಬಲಿಷ್ಠ ಜಾಲ ಹಾಗೂ ನಾಯಕತ್ವ ಅಭಿವೃದ್ಧಿ ಅವಕಾಶಗಳನ್ನು ಸಹ ಒದಗಿಸುತ್ತವೆ. ಹೊಸ ವಿದ್ಯಾರ್ಥಿವೇತನ ಪಡೆದವರು ಹಳೆಯ ಮಿತಿಗಳನ್ನು ಮೀರಿ ದೊಡ್ಡ ಕನಸು ಕಾಣಬೇಕು ಮತ್ತು ‘ವಿಕಸಿತ ಭಾರತ’ ಗುರಿಯತ್ತ ಮುನ್ನಡೆಯಬೇಕು ಎಂದು ನಾವು ಪ್ರೋತ್ಸಾಹಿಸುತ್ತೇವೆ,” ಎಂದರು.

ವೈವಿಧ್ಯ ಮತ್ತು ಶ್ರೇಷ್ಠತೆಗೆ ಒತ್ತು: ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ವೈವಿಧ್ಯ ಮತ್ತು ಶೈಕ್ಷಣಿಕ ಶ್ರೇಷ್ಠತೆ ಎರಡೂ ಸ್ಪಷ್ಟವಾಗಿ ಗೋಚರಿಸುತ್ತವೆ. ಆಯ್ಕೆ ಆದವರಲ್ಲಿ ಶೇಕಡಾ 83ರಷ್ಟು ವಿದ್ಯಾರ್ಥಿಗಳು ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳಿಂದ ಬಂದಿದ್ದಾರೆ. ಶೈಕ್ಷಣಿಕ ಸಾಧನೆಯ ವಿಚಾರಕ್ಕೆ ಬಂದರೆ ಶೇಕಡಾ 97ರಷ್ಟು ಯುಜಿ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಯುಜಿ ವಿದ್ಯಾರ್ಥಿಗಳಲ್ಲಿ ಶೇಕಡಾ 48ರಷ್ಟು ವಿದ್ಯಾರ್ಥಿನಿಯರು ಮತ್ತು ಶೇಕಡಾ 52ರಷ್ಟು ವಿದ್ಯಾರ್ಥಿಗಳು ಇದ್ದಾರೆ. ಈ ವರ್ಷ 146 ದಿವ್ಯಾಂಗ ವಿದ್ಯಾರ್ಥಿಗಳನ್ನೂ ಆಯ್ಕೆ ಮಾಡಲಾಗಿದೆ.

ಇದೇ ವೇಳೆ, ಆಯ್ಕೆಯಾದ 100 ಪಿಜಿ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ (Artificial Intelligence), ಕಂಪ್ಯೂಟರ್ ಸೈನ್ಸ್ (Computer Science), ನವೀಕರಿಸಬಹುದಾದ ಇಂಧನ (Renewable Energy) ಮತ್ತು ಲೈಫ್ ಸೈನ್ಸಸ್(Life Sciences) ಮೊದಲಾದ ಭವಿಷ್ಯವಿರುವ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಅನುದಾನಕ್ಕೆ ಮೀರಿದ ಬೆಂಬಲ: ವಿದ್ಯಾರ್ಥಿವೇತನದ ಜೊತೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಗತ್ತಿನಾದ್ಯಂತ ಇರುವ- ಈ ಹಿಂದೆ  ವಿದ್ಯಾರ್ಥಿವೇತನ ಪಡೆದವರ ಜಾಲದೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ಹಾಗೂ ತಜ್ಞರ ಮೂಲಕ ನಡೆಸಲಾಗುವ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಹಿಂದಿನ ಹಲವಾರು ವಿದ್ಯಾರ್ಥಿಗಳು ದೇಶ ಹಾಗೂ ವಿದೇಶಗಳಲ್ಲಿ ಉತ್ತಮ ಉದ್ಯೋಗಗಳನ್ನು ಪಡೆದಿದ್ದು, ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಹೆಸರನ್ನು ಮಿಂಚುವಂತೆ ಮಾಡಿದ್ದಾರೆ.

ಫಲಿತಾಂಶ ಪರಿಶೀಲನೆ ಹೇಗೆ?
ಅರ್ಜಿದಾರರು scholarships.reliancefoundation.org ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ 17 ಅಂಕಿಯ ಅರ್ಜಿ ಸಂಖ್ಯೆ ಅಥವಾ ನೋಂದಾಯಿತ ಇ-ಮೇಲ್ ಐಡಿಯನ್ನು ನಮೂದಿಸುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು.


Share It

You May Have Missed

You cannot copy content of this page