ಸುದ್ದಿ

ಹೊಸ ವರ್ಷ ಸ್ವಾಗತಕ್ಕೆ ಕಟ್ಟುನಿಟ್ಟಿನ ಭದ್ರತೆ: ಪಾರ್ಟಿ ಆಯೋಜನೆಗೆ ಪೊಲೀಸರಿಂದ ಸ್ಪಷ್ಟ ಮಾರ್ಗಸೂಚಿಗಳು

Share It

ಬೆಂಗಳೂರು:ಹೊಸ ವರ್ಷ 2026ಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಬೆಂಗಳೂರಿನಲ್ಲಿ ಸಂಭ್ರಮದ ಸಿದ್ಧತೆಗಳ ಜೊತೆಗೆ ಭದ್ರತೆಗೂ ಮಹತ್ವ ನೀಡಲಾಗಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ಪ್ರಕಟಿಸಿದ್ದಾರೆ. ಈ ನಿಯಮಗಳು ಸಾರ್ವಜನಿಕರು, ಹೋಟೆಲ್‌ಗಳು, ಪಬ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು ಮತ್ತು ಕಾರ್ಯಕ್ರಮ ಆಯೋಜಕರಿಗೆ ಅನ್ವಯವಾಗುತ್ತವೆ.

ನಗರದಲ್ಲಿ ನಡೆಯುವ ಎಲ್ಲ ಹೊಸ ವರ್ಷದ ಪಾರ್ಟಿಗಳು ಜನವರಿ 1ರ ಬೆಳಿಗ್ಗೆ 1 ಗಂಟೆಯೊಳಗೆ ಕಡ್ಡಾಯವಾಗಿ ಮುಕ್ತಾಯಗೊಳ್ಳಬೇಕು ಎಂದು ಸೂಚಿಸಲಾಗಿದೆ. ಯಾವುದೇ ಪಬ್ ಅಥವಾ ರೆಸ್ಟೋರೆಂಟ್ ತನ್ನ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಅತಿಥಿಗಳಿಗೆ ಅವಕಾಶ ನೀಡುವಂತಿಲ್ಲ. ಸಾಮರ್ಥ್ಯ ತುಂಬಿದ ನಂತರ ಪ್ರವೇಶ ದ್ವಾರಗಳನ್ನು ಮುಚ್ಚಿ, ಜನಸಂದಣಿಯನ್ನು ನಿಯಂತ್ರಿಸುವ ಜವಾಬ್ದಾರಿ ಆಯೋಜಕರದ್ದೇ ಆಗಿರುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಸಾರ್ವಜನಿಕ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ. ಧಾರ್ಮಿಕ ಅಥವಾ ಸಾಮಾಜಿಕ ಭಾವನೆಗಳಿಗೆ ನೋವುಂಟು ಮಾಡುವ ಹಾಡುಗಳು, ಘೋಷಣೆಗಳು, ಪ್ರದರ್ಶನಗಳು ಸಂಪೂರ್ಣ ನಿಷೇಧಿತವಾಗಿವೆ. ವಾಣಿಜ್ಯ ಸ್ಥಳಗಳ ಒಳಗೆ ಪಟಾಕಿ ಅಥವಾ ಯಾವುದೇ ರೀತಿಯ ಸ್ಪೋಟಕ ವಸ್ತುಗಳನ್ನು ಬಳಸಲು ಅನುಮತಿ ಇರುವುದಿಲ್ಲ.

ಪಾರ್ಟಿ ಅಥವಾ ಕಾರ್ಯಕ್ರಮ ಆಯೋಜಿಸಲು ತಾತ್ಕಾಲಿಕ ಪರವಾನಗಿ ಕಡ್ಡಾಯವಾಗಿದ್ದು, ಈ ಪರವಾನಗಿಯನ್ನು ಡಿಸೆಂಬರ್ 31ರಿಂದ ಜನವರಿ 1ರ ಬೆಳಿಗ್ಗೆ 1 ಗಂಟೆಯವರೆಗೆ ಮಾತ್ರ ನೀಡಲಾಗುತ್ತದೆ. ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಧ್ವನಿ ವ್ಯವಸ್ಥೆ ಬಳಸಲು ಪ್ರತ್ಯೇಕ ಅನುಮತಿ ಪಡೆದು ನಿಗದಿತ ಮಿತಿಯೊಳಗೆ ಶಬ್ದವನ್ನು ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ಭದ್ರತಾ ದೃಷ್ಟಿಯಿಂದ ಅಗ್ನಿ ಸುರಕ್ಷತಾ ವ್ಯವಸ್ಥೆ, ಜನಸಂದಣಿ ನಿಯಂತ್ರಣ ಕ್ರಮಗಳು, ಸಮರ್ಪಕ ಬೆಳಕು ಮತ್ತು ಬ್ಯಾಕಪ್ ವಿದ್ಯುತ್ ವ್ಯವಸ್ಥೆ ಇರಬೇಕು. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯವಾಗಿದ್ದು, ಕನಿಷ್ಠ 30 ದಿನಗಳವರೆಗೆ ದೃಶ್ಯ ದಾಖಲೆ ಸಂಗ್ರಹಿಸಬೇಕು. ರಸ್ತೆಗಳತ್ತ ಮುಖ ಮಾಡಿರುವ ಕ್ಯಾಮೆರಾಗಳನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಸಾರ್ವಜನಿಕರಿಗೆ ಮನವಿ ಮಾಡಿದ ಪೊಲೀಸ್ ಮಹಾ ನಿರ್ದೇಶಕರು, ಮದ್ಯಪಾನದಿಂದ ವಿವೇಚನೆ ಕುಗ್ಗಿ ಅನಾವಶ್ಯಕ ಜಗಳಗಳು ಅಥವಾ ಚುಡಾಯಿಸುವಿಕೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಅತಿಯಾದ ಶಬ್ದ, ಪಟಾಕಿ ಸಿಡಿತ ಮತ್ತು ವದಂತಿಗಳು ಜನರಲ್ಲಿ ಆತಂಕ ಹಾಗೂ ಗೊಂದಲ ಉಂಟುಮಾಡಬಹುದು. ಆದ್ದರಿಂದ ಹೊಸ ವರ್ಷಾಚರಣೆಯನ್ನು ಶಾಂತವಾಗಿ, ಜಾಗೃತಿಯಿಂದ ಹಾಗೂ ನಿಯಮಗಳನ್ನು ಪಾಲಿಸಿಕೊಂಡು ಆಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.


Share It

You cannot copy content of this page