ಬೆಂಗಳೂರು: ಯಲಹಂಕ ಸಮೀಪದ ಕೋಗಿಲು ಲೇಔಟ್‌ನಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆಗಳನ್ನು ತೆರವುಗೊಳಿಸಿದ ಪ್ರಕರಣ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ವಿಚಾರದಲ್ಲಿ ಕೇರಳ ಮುಖ್ಯಮಂತ್ರಿ ಹಾಗೂ ಅಲ್ಲಿನ ನಾಯಕರ ಪ್ರತಿಕ್ರಿಯೆ ಅನಗತ್ಯ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ರಾಜ್ಯದ ಆಡಳಿತ ವಿಚಾರಗಳಲ್ಲಿ ಹೊರರಾಜ್ಯದ ನಾಯಕರು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ನಾವು ಅವರ ರಾಜ್ಯದಲ್ಲಿ ಹಸ್ತಕ್ಷೇಪ ಮಾಡಿದರೆ ಅವರು ಒಪ್ಪಿಕೊಳ್ಳುವರೇ?” ಎಂದು ಪ್ರಶ್ನಿಸಿದರು. ನಿರಾಶ್ರಿತರಿಗೆ ಯಾವ ರೀತಿಯ ನೆರವು ನೀಡಬೇಕು ಎಂಬುದನ್ನು ರಾಜ್ಯ ಸರ್ಕಾರವೇ ಚರ್ಚಿಸಿ ತೀರ್ಮಾನಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಕೋಗಿಲು ಲೇಔಟ್‌ನಲ್ಲಿ ವಾಸವಿದ್ದವರಲ್ಲಿ ರೋಹಿಂಗ್ಯಾ ಅಥವಾ ಬಾಂಗ್ಲಾದೇಶ ಮೂಲದವರು ಇರಬಹುದು ಎಂಬ ಅನುಮಾನಗಳ ಕುರಿತು ಮಾತನಾಡಿದ ಗೃಹ ಸಚಿವರು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದರು. “ಅವರು ರೋಹಿಂಗ್ಯಾ ಅಥವಾ ಅಕ್ರಮ ವಲಸಿಗರಾಗಿರುವುದು ದೃಢಪಟ್ಟರೆ, ಕೇಂದ್ರ ಸರ್ಕಾರಕ್ಕೆ ಒಪ್ಪಿಸಲಾಗುತ್ತದೆ” ಎಂದು ಹೇಳಿದರು.
ಈ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮನೆ ಕಳೆದುಕೊಂಡವರಿಗೆ ಪರಿಹಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸುವ ತೀರ್ಮಾನ ಕೈಗೊಂಡಿದ್ದಾರೆ. ಎಲ್ಲ ಸಾಧಕ–ಬಾಧಕಗಳನ್ನು ಪರಿಶೀಲಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಇತರ ರಾಜ್ಯಗಳ ನಾಯಕರು ಹೇಳಿಕೆ ನೀಡಿದ ಕಾರಣಕ್ಕೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಸಂತ್ರಸ್ತರಲ್ಲಿ ಬೇರೆ ರಾಜ್ಯದವರು ಇರಬಹುದು, ಆದರೆ ಅವರ ಹೇಳಿಕೆಗಳ ಆಧಾರದಲ್ಲಿ ಈ ನಿರ್ಧಾರ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಧಿಕಾರಿಗಳ ಮೇಲೆ ಕ್ರಮ:
ಯಲಹಂಕ ವಲಯದ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಬಳಸಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ವಸತಿ ಇಲಾಖೆಯ ಮೂಲಕ ನಿರ್ಗತಿಕರಿಗೆ ಮನೆ ನಿರ್ಮಿಸಿ ನೀಡುವುದಾಗಿ ಸಿಎಂ ಮತ್ತು ಡಿಸಿಎಂ ಭರವಸೆ ನೀಡಿದ್ದಾರೆ.
ಡಿಸೆಂಬರ್ 20ರಂದು ಸರ್ಕಾರಿ ಜಾಗದಲ್ಲಿದ್ದ ಸುಮಾರು 167 ಶೆಡ್‌ಗಳನ್ನು ತೆರವುಗೊಳಿಸಲಾಗಿತ್ತು. ಮುನ್ನೆಚ್ಚರಿಕೆಯಾಗಿ ನೋಟಿಸ್ ನೀಡಿದರೂ ಜಾಗ ಖಾಲಿ ಮಾಡದ ಕಾರಣ ತೆರವು ಅನಿವಾರ್ಯವಾಯಿತು. ಪ್ರತಿ ಮನೆ ನಿರ್ಮಾಣಕ್ಕೆ ಸುಮಾರು ₹11.20 ಲಕ್ಷ ವೆಚ್ಚವಾಗಲಿದೆ. ಸಾಮಾನ್ಯ ವರ್ಗ ಹಾಗೂ ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ ಕೇಂದ್ರ–ರಾಜ್ಯ ಸರ್ಕಾರದ ಸಬ್ಸಿಡಿ ಲಭ್ಯವಿದ್ದು, ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ನೀಡುವ ಬಗ್ಗೆ ಚರ್ಚಿಸಲಾಗಿದೆ.

