ದೇವನಹಳ್ಳಿ: ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಬೈಕ್ ವ್ಹೀಲಿಂಗ್ ಮಾಡುವ ವೇಳೆ ಎದುರುಗಡೆಯಿಂದ ಬರುತ್ತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳಾದ ವಿಜಯಪುರ ಪಟ್ಟಣದ ಮನೋಜ್ (19) ಹಾಗೂ ಹರ್ಭಾಜ್ (19) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ವಿಜಯಪುರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಬೆಳಗ್ಗೆ ಮಳೆಯ ವೇಳೆ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ಈ ವೇಳೆ ತುಂತುರು ಮಳೆಯೂ ಸುರಿಯುತ್ತಿದ್ದು, ಎದುರಿಗೆ ಬರುತ್ತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದೆ. ವಿಪರೀತ ರಕ್ತಸ್ರಾವವಾದ ಕಾರಣ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ.
ಅಪಘಾತ ತಪ್ಪಿಸಲು ಪ್ರಯತ್ನಿಸಿದ ಕ್ಯಾಂಟರ್ ಚಾಲಕ ರಸ್ತೆ ಬದಿಗೆ ಕ್ಯಾಂಟರ್ ಎಳೆದಿದ್ದು, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.