ಬೆಸ್ಕಾಂ ನಿರ್ವಹಣಾ ಕೆಲಸ: ಜ.8ರಂದು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್

Share It

ಬೆಂಗಳೂರು: ರಾಜಧಾನಿ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ವಿದ್ಯುತ್ ಕಡಿತ ಎದುರಾಗಲಿದೆ. ಜನವರಿ 8ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಇದೇ ದಿನ ತುಮಕೂರು ಹಾಗೂ ಮೈಸೂರಿನ ಕೆಲವು ಭಾಗಗಳಲ್ಲಿಯೂ ಕರೆಂಟ್ ಇರಲಿಕ್ಕಿಲ್ಲ.

ಹೊಸ ವರ್ಷದ ಆರಂಭದಿಂದಲೇ ಬೆಂಗಳೂರಿಗರು ವಿದ್ಯುತ್ ವ್ಯತ್ಯಯದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಈಗಾಗಲೇ ತಿಂಗಳ ಆರಂಭದಿಂದ ಸುಮಾರು 17 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಮುಂದಿನ ದಿನಗಳಲ್ಲಿ ನಿರ್ವಹಣಾ ಕಾಮಗಾರಿ ಮತ್ತು ರೈಲ್ವೆ ಮೇಲ್ಸೇತುವೆ ನಿರ್ಮಾಣದ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ತುಮಕೂರು ಭಾಗಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆ ನಿಲ್ಲಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ವಿದ್ಯುತ್ ಕಡಿತ

ಜನವರಿ 8ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ. ಇಪಿಐಪಿ ವ್ಯಾಪ್ತಿ, ಸುತ್ತಮುತ್ತಲಿನ ಐಟಿ ಪಾರ್ಕ್‌ಗಳು ಮತ್ತು ವಾಣಿಜ್ಯ ಕೇಂದ್ರಗಳು, ಅತ್ತಿಬೆಲೆ, ಆನೇಕಲ್, ಚಂದಾಪುರ, ಮಂಚನಹಳ್ಳಿ, ಮಾಯಸಂದ್ರ, ಕೊಂಬಿಲಿಪುರ, ಹಾರೋಹಳ್ಳಿ, VBHC ಅಪಾರ್ಟ್‌ಮೆಂಟ್‌ಗಳು ಹಾಗೂ ಸಮೀಪದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ತುಮಕೂರಿನಲ್ಲಿ ದೀರ್ಘಾವಧಿ ವ್ಯತ್ಯಯ

ಬೆಂಗಳೂರು ಸಮೀಪದ ತುಮಕೂರಿನಲ್ಲಿ ತುರ್ತು ನಿರ್ವಹಣಾ ಹಾಗೂ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾಮಗಾರಿಗಳ ಕಾರಣ ಜನವರಿ 7ರಿಂದ 16ರವರೆಗೆ ವಿವಿಧ ದಿನಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ತುಮಕೂರು ನಗರ ಉಪವಿಭಾಗ–1ರಲ್ಲಿ ಫೀಡರ್ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಜನವರಿ 8, 10, 12, 14 ಮತ್ತು 16ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಹಲವೆಡೆ ಕರೆಂಟ್ ಇರುವುದಿಲ್ಲ.

ಈ ಅವಧಿಯಲ್ಲಿ ಬೆಳಗುಂಬ, ಲಂಬಾಣಿ ತಾಂಡ್ಯ, ಜ್ಯೋತಿಪುರ, ಎಸ್‌.ಎಸ್‌. ಲೇಔಟ್‌, ಕುಂದೂರು, ವೆಂಕಟಾದ್ರಿ ಲೇಔಟ್‌, ಹನುಮಂತಪುರ, ಕುವೆಂಪುನಗರ, ಆದರ್ಶ ನಗರ, ಅಶ್ವತೋಟ, ಜಗನ್ನಾಥಪುರ, ಶಾರದಾದೇವಿ ನಗರ, ಗಣೇಶ ನಗರ, ನಿರ್ವಾಣಿ ಲೇಔಟ್‌, ಅಗ್ನಿಬನ್ನಿರಾಯ ನಗರ, ಭಗ್ಯ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಪರಿಣಾಮಕ್ಕೆ ಒಳಗಾಗಲಿವೆ.

ಮೈಸೂರಲ್ಲೂ ಕರೆಂಟ್ ಇಲ್ಲ

ಮೈಸೂರಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಭೂಗತ ಕೇಬಲ್ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಜನವರಿ 8ರಂದು ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ವಿ.ವಿ. ಮೊಹಲ್ಲಾ ಉಪವಿಭಾಗದ ಒಂಟಿಕೊಪ್ಪಲು ಹಾಗೂ ಜಯಲಕ್ಷ್ಮಿಪುರಂ ಶಾಖಾ ವ್ಯಾಪ್ತಿಯ ಯಾದವಗಿರಿ, ವಿವೇಕಾನಂದ ಮುಖ್ಯ ರಸ್ತೆ, ಜಾವ ಸರ್ಕಲ್, ಸಂಕಲ್ಪ ಸೆಂಟ್ರಲ್ ಪಾರ್ಕ್‌, ವೈಷ್ಣವಿ ಸರೋವರ ಅಪಾರ್ಟ್‌ಮೆಂಟ್‌ಗಳು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ.

ಇದೇ ವೇಳೆ 11 ಕೆ.ವಿ ಜಯಲಕ್ಷ್ಮಿಪುರಂ ವಿದ್ಯುತ್ ಮಾರ್ಗದ ವ್ಯಾಪ್ತಿಯಲ್ಲಿ ಜಯಲಕ್ಷ್ಮಿಪುರಂ, ಬಿಎಸ್‌ಎನ್‌ಎಲ್ ಕಚೇರಿ, ಮಹಾಜನ ಕಾಲೇಜು, ಬಿಎಂಎಚ್ ಆಸ್ಪತ್ರೆ, ರಾಘವೇಂದ್ರ ಸ್ವಾಮಿ ಮಠ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Share It

You May Have Missed

You cannot copy content of this page