ಬೆಂಗಳೂರು: 2020 ಮತ್ತು 2021 ನೇ ಸಾಲಿನ ಚಲನಚಿತ್ರ ಜೀವಮಾನ ಸಾಧನೆ ಪ್ರಶಸ್ತಿಗಳಿಗೆ ಗಣ್ಯರನ್ನು ಆಯ್ಕೆ ಮಾಡಲಾಗಿದೆ.
2020 ನೇ ಸಾಲಿನ ಡಾ. ರಾಜ್ ಕುಮಾರ್ ಪ್ರಶಸ್ತಿಗೆ ನಟಿ ಡಾ. ಜಯಮಾಲಾ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಎಂ.ಎನ್.ಸತ್ಯು, ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ಹಿರಿಯ ಸ್ಥಿರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ.
2021 ನೇ ಸಾಲಿನ ಡಾ. ರಾಜ್ ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಕೆ.ಶಿವರುದ್ರಯ್ಯ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ನಟ ಎಂ.ಕೆ. ಸುಂದರರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ಐದು ಲಕ್ಷ ರೂಪಾಯಿಗಳ ನಗದು ಬಹುಮಾನ ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರುತ್ತದೆ. ಆಯ್ಕೆಗೆ ಸಂಬಂಧಿಸಿದಂತೆ ಸರಕಾರ ನೇಮಿಸಿದ್ದ ಸಲಹಾ ಸಮಿತಿ ನೀಡಿದ್ದ ಶಿಫಾರಸ್ಸಿನ ಆಧಾರದಲ್ಲಿ ಆಯ್ಕೆಯನ್ನು ಅಂತಿಮಗೊಳಿಸಿ ಸರಕಾರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

